ಮಧ್ಯ ಪೂರ್ವ ಕಾಲದ ಸೂಫಿ ಸಂತ ಮಕ್ದೂಂ ಅಲ್ ಮಾಹಿಮಿ ಈಗಿನ ಮುಂಬೈನ ಮಾಹಿಮ್‌ನಲ್ಲಿ ಸ್ಥಾಪಿಸಿದ ದರ್ಗಾವೊಂದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿ ಹೆಸರು ಮಾಡಿದೆ.
14-15ನೇ ಶತಮಾನಕ್ಕೆ ಸೇರಿದ ಸೂಫಿ ಸಂತ ಮಕ್ದೂಂ ಒಬ್ಬ ಇಸ್ಲಾಮಿಕ್ ಪಂಡಿತರಾಗಿದ್ದು, ಅಂದಿನ ಗುಜರಾತ್ ಸುಲ್ತಾನೇಟ್‌ನ ಅಹಮದ್ ಶಾ-1 ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದರು. 1923ರಲ್ಲಿ ನಿರ್ಮಿಸಲ್ಪಟ್ಟ ಮಾಹಿಮ್ ಪೊಲೀಸ್ ಠಾಣೆ ಇರುವ ಜಾಗದಲ್ಲೇ ಮಕ್ದೂಂರ ಬೈಠಕ್‌ಗಳು ನಡೆಯುತ್ತಿದ್ದವು ಎಂಬ ಉಲ್ಲೇಖಗಳಿವೆ.
17ನೇ ಶತಮಾನದಲ್ಲಿ ಮುಂಬೈ ಬ್ರಿಟಿಷರ ತೆಕ್ಕೆಗೆ ಬಿದ್ದ ಬಳಿಕ ನಗರದಲ್ಲಿ ಪೊಲೀಸ್ ಕರ್ತವ್ಯ ನಿರ್ವಹಣೆಗೆಂದು ’ಭಂಡಾರಿ ಸೇನೆ’ಯನ್ನು ಸ್ಥಾಪಿಸಲಾಯಿತು. ಇದುವೇ ಮುಂದೆ ಮುಂಬೈ ಪೊಲೀಸ್‌ನ ಅಡಿಪಾಯವಾಯಿತು. ಅಂದಿನಿಂದ ಇಂದಿನವರೆಗೂ ಮುಂಬೈ ಪೊಲೀಸರು ಇದೇ ಮಕ್ದೂಂ ಸಂತರನ್ನು ಆರಾಧಿಸುತ್ತಾ ಬಂದಿದ್ದು, ಯಾವುದೇ ಕಠಿಣವಾದ ಪ್ರಕರಣವನ್ನು ಇತ್ಯರ್ಥ ಪಡಿಸಲು ಸಂತನ ಆಶೀರ್ವಾದ ಪಡೆದೇ ತೀರುತ್ತಾರೆ.
1935ರಲ್ಲಿ ಮಾಹಿಮ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಎಸ್‌ಎಸ್‌ಇ ರೇಮಂಡ್ ಸಹ ಇದೇ ದರ್ಗಾದ ಭಕ್ತರಾಗಿದ್ದರಂತೆ. ಈ ಪೊಲೀಸ್ ಠಾಣೆಯ ಮುಖ್ಯಸ್ಥರ ಚೇಂಬರ್‌ನಲ್ಲಿ ಪುಟ್ಟದೊಂದು ಉಪ ಚೇಂಬರ್ ಇದ್ದು, ಇದರಲ್ಲಿ ಹಸಿರು ಕಬೋರ್ಡ್‌ನಲ್ಲಿ ಬೆಳ್ಳಿ ಆಭರಣಗಳು ಹಾಗೂ ಚಾದರದ ಸಾಮಗ್ರಿಗಳನ್ನು ಇಡಲಾಗಿದೆ. ಇವುಗಳನ್ನು ಡಿಸೆಂಬರ್‌ನಲ್ಲಿ ಆರಂಭಗೊಳ್ಳುವ ಉರುಸ್ ಸಮಾರಂಭದ ವೇಳೆ ದರ್ಗಾಗೆ ಕೊಂಡೊಯ್ಯಲಾಗುತ್ತದೆ.
ಪ್ರತಿ ಗುರುವಾರದಂದು ಇದೇ ಉಪ ಚೇಂಬರ್‌ನಲ್ಲಿ ಪೊಲೀಸರೊಂದಿಗೆ ಮೌಲಾನಾಗಳು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಇದಾದ ಬಳಿಕ ಸಶಸ್ತ್ರಸಜ್ಜಿತ ಪೊಲೀಸರು ದರ್ಗಾಗೆ ತೆರಳಿ ಸಲ್ಯೂಟ್ ಮಾಡಿ ಬರುತ್ತಾರೆ.
ಪ್ರತಿ ವರ್ಷದ 10 ದಿನಗಳ ಉರುಸ್‌ನ ಮೊದಲ ದಿನ ಮಾಹಿಮ್ ಡಿಸಿಪಿ ಮುಂದಾಳತ್ವದಲ್ಲಿ ಮೆರವಣಿಗೆ ನಡೆದು, ಪೊಲೀಸರು ದರ್ಗಾಗೆ ಚಾದರ ಅರ್ಪಿಸುತ್ತಾರೆ. ಈ ವೇಳೆ ಮುಂಬೈ ಪೊಲೀಸ್ ಬ್ಯಾಂಡ್ ಪ್ರದರ್ಶನವೂ ಇರುತ್ತದೆ.