ಇನ್ನು ಮುಂದೆ ರೂಪೇ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಯುಪಿಐ ಮೂಲಕ ಪಾವತಿ ಮಾಡಬಹುದಾದ ವ್ಯವಸ್ಥೆ ತರಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಹಾಗೂ ಗೂಗಲ್ ಪೇ ಒಡಂಬಡಿಕೆ ಮಾಡಿಕೊಂಡಿವೆ.
ಯುಪಿಐ ವ್ಯವಹಾರಕ್ಕೆ ತೆರೆದುಕೊಂಡಿರುವ ಎಲ್ಲಾ ಆನ್ಲೈನ್ ಹಾಗೂ ಆಫ್ಲೈನ್ ವರ್ತಕರ ಬಳಿ ಇನ್ನು ಮುಂದೆ ಯುಪಿಐ ಮೂಲಕ ರೂಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿಕೊಂಡು ಪಾವತಿ ಮಾಡಬಹುದಾಗಿದೆ.
ಸದ್ಯದ ಮಟ್ಟಿಗೆ ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಕೋಟಕ್ ಮಹಿಂದ್ರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಗಳ ರೂಪೇ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಈ ಸೇವೆ ಲಭ್ಯವಿದೆ.
“ಈ ನಡೆಯಿಂದಾಗಿ ಗೂಗಲ್ ಪೇ ಬಳಕೆದಾರರಿಗೆ ಇನ್ನಷ್ಟು ವೈವಿಧ್ಯಮಯ ಪಾವತಿ ಆಯ್ಕೆಗಳು ಸಿಗಲಿವೆ. ಜೊತೆಗೆ ಡಿಜಿಟಲ್ ಪಾವತಿಯತ್ತ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಸೆಳೆಯಲು ಅನುವಾಗಲಿದೆ,” ಎಂದು ಗೂಗಲ್ನ ಪ್ರಾಡಕ್ಟ್ ಮ್ಯಾನೇಜ್ಮೆಂಟ್ನ ನಿರ್ದೇಶಕ ಶರತ್ ಬುಲುಸು ತಿಳಿಸಿದ್ದಾರೆ.
ಗೂಗಲ್ ಪೇನಲ್ಲಿ “RuPay credit card on UPI” ಆಯ್ಕೆ ಮೇಲೆ ಟ್ಯಾಪ್ ಮಾಡುವ ಮೂಲಕ ಬಳಕೆದಾರರು ತಮ್ಮ ಪಾವತಿ ಆಯ್ಕೆಗೆ ರೂಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಬಹುದಾಗಿದೆ.
ಇದಾದ ಬಳಿಕ, ಸಂಬಂಧಪಟ್ಟ ಬ್ಯಾಂಕ್ನಲ್ಲಿ ನೋಂದಣಿಯಾಗಿರುವ ದೂರವಾಣಿ ಸಂಖ್ಯೆಗೆ ಬರುವ ಓಟಿಪಿ ಪಿನ್ ಬಳಸಿ, ಕ್ರೆಡಿಟ್ ಕಾರ್ಡ್ನ ಕೊನೆಯ ಆರು ಅಂಕಿಗಳು ಹಾಗೂ ಕ್ರೆಡಿಟ್ ಕಾರ್ಡ್ನ ಎಕ್ಸ್ಪೈರಿ ವಿವರಗಳನ್ನು ಬಳಸಿಕೊಂಡು ವಿಶಿಷ್ಟವಾದ ಯುಪಿಐ ಪಿನ್ ಸೃಷ್ಟಿಸಿಕೊಳ್ಳಬೇಕಾಗುತ್ತದೆ.
ರೂಪೇ ಕ್ರೆಡಿಟ್ ಕಾರ್ಡ್ಗಳನ್ನು ಯುಪಿಐ ಪ್ಲಾಟ್ಫಾರಂಗಳೊಂದಿಗೆ ಲಿಂಕ್ ಮಾಡಲು ರಿಸರ್ವ್ ಬ್ಯಾಂಕ್ (ಆರ್ಬಿಐ) ಜೂನ್ 2022ರಲ್ಲಿ ಅನುಮತಿ ನೀಡಿತ್ತು.
ಎನ್ಪಿಸಿಐ ದತ್ತಾಂಶದ ಪ್ರಕಾರ, 2022ರಲ್ಲಿ ಯುಪಿಐ ಮೂಲಕ ಒಟ್ಟಾರೆ 74 ಶತಕೋಟಿ ವ್ಯವಹಾರಗಳು ನಡೆದಿದ್ದು, 125.94 ಲಕ್ಷ ಕೋಟಿ ರೂ. ಗಳ ವಹಿವಾಟು ನಡೆದಿದೆ. ಇದೇ ಮಾರ್ಚ್ ತಿಂಗಳಲ್ಲಿ 8.7 ಶತಕೋಟಿ ಯುಪಿಐ ವಹಿವಾಟುಗಳು ನಡೆದಿವೆ.