ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಆಕ್ಷೇಪಾರ್ಹ ಫೋಟೋಗಳು ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನು ಅಪ್ ಲೋಡ್ ಮಾಡುವ ಮೂಲಕ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆರೋಪಿ ಅಮನ್ ದೀಪ್ ಕುಮಾರ್ ಪಂಜಾಬ್ ನ ಕಪುರ್ತಲಾ ಮೂಲದವ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನಿರುದ್ಯೋಗಿಯಾಗಿರುವ ಆರೋಪಿ ಆನ್ ಲೈನ್ ನಲ್ಲಿ ಲೈಂಗಿಕ ವಿಷಯ ಸರ್ಫಿಂಗ್ ಮಾಡುವ ಅಭ್ಯಾಸ ಹೊಂದಿದ್ದು, ಮೋಜಿಗಾಗಿ ಈ ಕೃತ್ಯ ಮಾಡಿದ್ದಾನೆ.
ಯಾರೋ ನಕಲಿ ಇನ್‌ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ತನ್ನ ಆಕ್ಷೇಪಾರ್ಹ ಫೋಟೋಗಳು ಮತ್ತು ಮೊಬೈಲ್ ಸಂಖ್ಯೆ ಅಪ್‌ಲೋಡ್ ಮಾಡಿದ್ದಾರೆ ಎಂದು ಆರೋಪಿಸಿ 24 ವರ್ಷದ ಶಹದಾರಾ ನಿವಾಸಿ ಪೊಲೀಸರಿಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನ ಐಪಿ ವಿಳಾಸಗಳನ್ನು ಸಂಗ್ರಹಿಸಿದ ತನಿಖಾ ತಂಡ ಇಂಟರ್‌ನೆಟ್ ಪ್ರೋಟೋಕಾಲ್ ಡೀಟೇಲ್ ರೆಕಾರ್ಡ್(ಐಪಿಡಿಆರ್) ನ ವಿವರವಾದ ವಿಶ್ಲೇಷಣೆಯನ್ನು ನಡೆಸಿದ್ದು, ಆರೋಪಿಯ ಮೊಬೈಲ್ ಸಂಖ್ಯೆಯ ವಿರುದ್ಧ ಆಪಾದಿತ ಐಪಿಡಿಆರ್ ವಿಳಾಸಗಳು ದಾಖಲಾಗಿವೆ ಎಂದು ಉಪ ಪೊಲೀಸ್ ಆಯುಕ್ತ(ಶಹದರಾ) ರೋಹಿತ್ ಮೀನಾ ತಿಳಿಸಿದ್ದಾರೆ. .
ಫೋನ್ ಸಂಖ್ಯೆಯು ಅಮನ್ ದೀಪ್ ಕುಮಾರ್ ಅವರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಕಂಡುಬಂದಿದೆ. ತಾಂತ್ರಿಕ ಕಣ್ಗಾವಲು ಮತ್ತು ರಹಸ್ಯ ಮಾಹಿತಿಯ ಸಹಾಯದಿಂದ ಆರೋಪಿಯನ್ನು ಪಂಜಾಬ್‌ನ ಕಪುರ್ತಲಾದಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.