
1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಲ್ಯಾನ್ಸ್ ನಾಯಕ್ ಕೃಷ್ಣರಾಜ್ ಸಮ್ರೀತ್ ಪುತ್ರ ತನ್ನ ತಂದೆಯಂತೆಯೇ ಸೇನೆ ಸೇರಲು ಉದ್ದೇಶಿಸಿದ್ದಾರೆ. ತಮ್ಮ ಈ ನಿರ್ಧಾರದಲ್ಲಿ ಅಚಲತೆ ತೋರಿರುವ ಪ್ರಜ್ವಲ್, ಐಐಎಂ ಇಂದೋರ್ ಹಾಗೂ ಐಐಎಂ ಕೋಯಿಕ್ಕೋಡ್‌ಗಳಲ್ಲಿ ವ್ಯಾಸಾಂಗ ಮಾಡುವ ಅವಕಾಶಗಳು ಬಂದರೂ ಸಹ ಡೆಹರಾಡೂನ್‌ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ) ಸೇರಲು ಉದ್ದೇಶಿಸಿದ್ದಾರೆ.
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪುಲ್ಗಾಂವ್ ತಾಲ್ಲೂಕಿನಲ್ಲಿ ವಾಸಿಸುವ ಪ್ರಜ್ವಲ್ ತಮ್ಮ ತಾಯಿ ಸರಿತಾ ಹಾಗೂ ಹಿರಿಯ ಸಹೋದರ ಕುನಾಲ್ ಜೊತೆಗೆ ಇದ್ದಾರೆ. ಬಾಲ್ಯದಿಂದಲೂ ಶಾಲೆಯಲ್ಲಿ ಅತ್ಯುತ್ತಮ ಅಂಕ ಗಳಿಸುತ್ತಾ ಬಂದಿರುವ ಪ್ರಜ್ವಲ್, ಎಂಬಿಎ ಪ್ರವೇಶ ಪರೀಕ್ಷೆ ಕ್ಯಾಟ್‌ನಲ್ಲಿ 97.51 ಪ್ರತಿಶತ ಅಂಕ ಗಳಿಸಿದ್ದಾರೆ.
ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿಎಸ್ಸಿ ಪೂರೈಸಿರುವ ಪ್ರಜ್ವಲ್, ಭಾರತೀಯ ಸೇನೆಯ ಎಸ್‌ಎಸ್‌ಬಿ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಜುಲೈನಿಂದ ತಮ್ಮ 18 ತಿಂಗಳ ತರಬೇತಿಯನ್ನು ಐಎಂಎನಲ್ಲಿ ಆರಂಭಿಸಲಿದ್ದಾರೆ ಪ್ರಜ್ವಲ್. ತರಬೇತಿ ಪೂರ್ಣಗೊಂಡಲ್ಲಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ತಮ್ಮ ಸೇವೆ ಆರಂಭಿಸಲಿದ್ದಾರೆ ಪ್ರಜ್ವಲ್.
ತನ್ನ ತಂದೆ ಹುತಾತ್ಮರಾದ ಸಂದರ್ಭದಲ್ಲಿ ತಾಯಿ ಗರ್ಭದಲ್ಲಿದ್ದ ಪ್ರಜ್ವಲ್, 45 ದಿನಗಳ ಬಳಿಕ ಜನಿಸಿರುವುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದು, ತಮ್ಮ ತಾಯಿಗೆ ಇಬ್ಬರು ಪುತ್ರರಲ್ಲಿ ಒಬ್ಬರು ಸೇನೆಗೆ ಸೇರಬೇಕೆಂಬ ಅಸೆ ಇದ್ದಿದ್ದಾಗಿ ತಿಳಿಸಿದ್ದರು.