ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಬಂದಿರುವ ನೂತನ ಶಾಸಕರು ಸೋಮವಾರದಂದು ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು, ಹಲವು ವಿಶೇಷಗಳಿಗೆ ಇದು ಸಾಕ್ಷಿಯಾಯಿತು. ಮೊದಲ ಬಾರಿ ಗೆದ್ದು ಬಂದ ಶಾಸಕರಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಕೊನೆಗೂ ಗೆದ್ದೇವಲ್ಲ ಎಂಬ ನೆಮ್ಮದಿಯ ಭಾವ ಹಿರಿಯರಲ್ಲಿತ್ತು.
ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಲು ಮಂಡ್ಯ ಶಾಸಕ ಗಣಿಗ ಪಿ. ರವಿಕುಮಾರ್ ಎತ್ತಿನಗಾಡಿಯಲ್ಲಿ ಆಗಮಿಸಿದ್ದರೆ, ಕೆಲವು ಶಾಸಕರು ವಿಧಾನಸಭೆ ಪ್ರವೇಶ ಮಾಡುವ ಮುನ್ನ ಮೆಟ್ಟಿಲುಗಳಿಗೆ ಶಿರಬಾಗಿ ನಮಸ್ಕರಿಸಿದ್ದಾರೆ. ಅಲ್ಲದೆ ವಿಧಾನಸಭಾ ಸಚಿವಾಲಯದಿಂದ ವ್ಯವಸ್ಥೆ ಮಾಡಲಾಗಿದ್ದ ಫೋಟೋ ಶೂಟ್ ನಲ್ಲಿ ಎಲ್ಲರೂ ಅತ್ಯುತ್ಸಾಹದಿಂದ ಭಾಗವಹಿಸಿದ್ದಾರೆ.
ಇನ್ನು ಪ್ರಮಾಣವಚನ ಸ್ವೀಕರಿಸುವಾಗಲೂ ಕೆಲ ಶಾಸಕರುಗಳು ವೈವಿಧ್ಯತೆ ಮೆರೆದಿದ್ದು, ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ, ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಕುಣಿಗಲ್ ಶಾಸಕ ಡಾ. ರಂಗನಾಥ್ ಕೂಡ ಡಿ.ಕೆ. ಶಿವಕುಮಾರ್ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ಜನತೆ, ಅಂಜನಾದ್ರಿ ಹನುಮಂತನ ಹೆಸರಿನಲ್ಲಿ, ರಹೀಮ್ ಖಾನ್ ಮತ್ತು ಕನೀಜ್ ಫಾತಿಮಾ, ಅಲ್ಲಾಹು ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶಿವಾನಂದ ಪಾಟೀಲ್, ಅಣ್ಣ ಬಸವಣ್ಣ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಸೋಮವಾರದಂದು 224 ಶಾಸಕರ ಪೈಕಿ 182 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ.