ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಆರ್ಥಿಕ ಸೌಲಭ್ಯ ಪಡೆದುಕೊಳ್ಳಲು ಇ-ಕೆವೈಸಿ ಕಡ್ಡಾಯವಾಗಿದೆ. ಇ-ಕೆವೈಸಿ ಹೊಂದದ ರೈತ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಬಿಡುಗಡೆಯಾಗುವುದಿಲ್ಲ.
ಕೃಷಿ ಇಲಾಖೆಯಿಂದ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೂ ಕೂಡ ಕೆಲ ರೈತ ಫಲಾನುಭವಿಗಳು ಇ-ಕೆವೈಸಿ ಮಾಡಿಸಿರುವುದಿಲ್ಲ. ಹೀಗಾಗಿ ಇದು ಕೊನೆಯ ಅವಕಾಶವಾಗಿದ್ದು, ಕೂಡಲೇ ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಗಳೊಂದಿಗೆ ಇ-ಕೆವೈಸಿ ಮಾಡಿಸಬಹುದು.
ಈ ವಿಧಾನಗಳಲ್ಲಿಯೂ ಇ-ಕೆವೈಸಿ ಮಾಡಬಹುದು:
ತಮ್ಮ ಸಮೀಪದ ಗ್ರಾಮ, ಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಇ-ಕೆವೈಸಿ ಮಾಡಿಸಬಹುದು. ಫಲಾನುಭವಿಗಳು ಸ್ವತ: ತಾವೇ ಪಿ.ಎಂ ಕಿಸಾನ್ ಪೋರ್ಟಲ್ ಮೂಲಕ ಮೊಬೈಲ್ ಒಟಿಪಿ ಪಡೆದು ಇ-ಕೆವೈಸಿ ಮಾಡಬಹುದು. ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ಮಾಡಿ ಪೋಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಪಿಎಂ ಕಿಸಾನ್ ಇ-ಕೆವೈಸಿ ತ್ವರಿತವಾಗಿ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಿಎಂ ಕಿಸಾನ್ ಮೊಬೈಲ್ ಆಪ್ ಪ್ಲೇ ಸ್ಟೋರ್‍ನಲ್ಲಿ(Play Store) ಡೌನ್ ಲೋಡ್ (Download) ಮಾಡಿಕೊಂಡು ಆಪ್ ಮೂಲಕ ಸ್ವತ: ಫಲಾನುಭವಿಗಳೇ ಮುಖ ಚಹರೆ ತೋರಿಸುವ ಮೂಲಕ(Facial Authentication) ಇ-ಕೆವೈಸಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಬಳ್ಳಾರಿ ಉಪ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.