ಮೌಂಟ್ ಎವರೆಸ್ಟ್‌ನ 8,849 ಮೀಟರ್ ಶಿಖರವನ್ನು ಏರಿದ ಆಸ್ಟ್ರೇಲಿಯಾದ 40 ವರ್ಷದ ವ್ಯಕ್ತಿಯೊಬ್ಬರು ಶಿಖರದಿಂದ ಹಿಂದಿರುಗುವಾಗ ಮೃತಪಟ್ಟಿದ್ದಾರೆ.
ಆಸ್ಟ್ರೇಲಿಯಾದ ಪರ್ತ್‌ನ ಜೇಸನ್ ಬರ್ನಾರ್ಡ್ ಕೆನ್ನಿಸನ್ ಅವರು ಆರೋಹಿಗಳು ‘ಡೆತ್ ಝೋನ್’ ಎಂದು ಕರೆಯುವ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ರು. ಆದರೆ, ಹಿಂದಿರುಗುವಾಗ ಅವರು ಮೃತಪಟ್ಟಿದ್ದಾರೆ. ಆದರೆ, ಶಿಖರವನ್ನು ತಲುಪುವ ಮೂಲಕ ಅವರು ಗುರಿ ಸಾಧಿಸಿದ್ದಾರೆ ಎಂದು ಕೆನ್ನಿಸನ್ ಕುಟುಂಬ ಹರ್ಷ ವ್ಯಕ್ತಪಡಿಸಿದೆ. ಅವರು ನಮಗೆ ತಿಳಿದಿರುವಂತೆ ಅತ್ಯಂತ ಧೈರ್ಯಶಾಲಿ, ಸಾಹಸಮಯ ವ್ಯಕ್ತಿಯಾಗಿದ್ದರು ಎಂದು ಕುಟುಂಬ ಹೇಳಿದೆ.
ಕೆನ್ನಿಸನ್ ಶಿಖರ ಏರಿ ಕೆಳಗಿಳಿಯುವಾಗ ಆರೋಗ್ಯ ಹದಗೆಟ್ಟಿದೆ. ಅವರ ಬಳಿ ಇದ್ದ ಆಮ್ಲಜನಕದ ಸಿಲಿಂಡರ್‌ಗಳು ಖಾಲಿಯಾಗುತ್ತಿದ್ದರಿಂದ, ಅವರನ್ನು ರಕ್ಷಿಸಲು ಕ್ಯಾಂಪ್ 4ಗೆ ಇಳಿಯುವಂತೆ ಸೂಚಿಸಲಾಗಿತ್ತು. ಆದರೆ, ಬಲವಾದ ಗಾಳಿಯಿಂದಾಗಿ, ಅವರು ಶಿಬಿರವನ್ನು ತಲುಪಲು ಸಾಧ್ಯವಾಗಲಿಲ್ಲ. ಇದರಿಂದ ಕೆನ್ನಿಸನ್ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಎವರೆಸ್ಟ್ ಆರೋಹಿಗಳಿಂದ ಡೆತ್ ಝೋನ್ ಎಂದು ಕರೆಯಲ್ಪಡುವ 8,000 ಮೀಟರ್ ಎತ್ತರದ ಪರ್ವತದ ಪ್ರದೇಶದಲ್ಲಿ ಅವರು ಮೃತಪಟ್ಟಿದ್ದಾರೆ.
ನಿಧಿಸಂಗ್ರಹಣೆಯ ಸದುದ್ದೇಶದಿಂದ ಅವರು ಮೌಂಟ್ ಎವರೆಸ್ಟ್ ಏರಲು ನಿರ್ಧರಿಸಿದ್ದರು. ನಿಧಿಸಂಗ್ರಹಣೆಗಾಗಿ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ಏರಲು ಪ್ರಯತ್ನಿಸುತ್ತಿರುವುದಾಗಿ ಕೆನ್ನಿಸನ್ ಹೇಳಿದ್ದರು.
ವರದಿ ಪ್ರಕಾರ, ಈ ಋತುವಿನಲ್ಲಿ ವಿಶ್ವದ ಅತಿ ಎತ್ತರದ ಪರ್ವತದ ಮೇಲೆ ಹತ್ತನೇ ಸಾವು ಇದಾಗಿದೆ. ನೇಪಾಳದ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಈ ಋತುವಿನಲ್ಲಿ ಸುಮಾರು 450 ಆರೋಹಿಗಳು ಮೌಂಟ್ ಎವರೆಸ್ಟ್ ಅನ್ನು ಏರಿದ್ದಾರೆ.