ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಭರವಸೆ ನೀಡಿ ಮಹಾರಾಷ್ಟ್ರದ ಮೂವರು ಬಿಜೆಪಿ ಶಾಸಕರಿಂದ ಹಣ ಪಡೆದ ಆರೋಪದ ಮೇಲೆ ನಾಗ್ಪುರ ಪೊಲೀಸರು ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಹಲವು ರಾಜ್ಯಗಳ 28 ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಮನಾರ್ಹ ವಿಷಯವೆಂದರೆ ಕಳೆದ ವರ್ಷ ಇಂಥದ್ದೇ ವಂಚನೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದರು.
ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಮೊರ್ಬಿ ನಿವಾಸಿ ಆರೋಪಿ ನೀರಜ್ ಸಿಂಗ್ ರಾಥೋಡ್‌ನನ್ನು ನಾಗ್ಪುರ ಪೊಲೀಸರು ಇದೀಗ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಆರೋಪಿ ನೀರಜ್ ಸಿಂಗ್ ರಾಥೋಡ್ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಹರಿಯಾಣ, ಜಾರ್ಖಂಡ್ ಮತ್ತು ದೆಹಲಿಯ 28 ಶಾಸಕರೊಂದಿಗೆ ಸಂಪರ್ಕದಲ್ಲಿದ್ದು ಅವರಿಗೆ ಹಣ ನೀಡಿದರೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದ. ಅವರಲ್ಲಿ ಮೂವರನ್ನು ಈಗಾಗಲೇ ವಂಚಿಸುವಲ್ಲಿ ಯಶಸ್ವಿಯಾಗಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯು ತಾನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಆಪ್ತ ಸಹಾಯಕನಂತೆ ನಟಿಸುವ ಮೂಲಕ ಶಾಸಕರಿಗೆ ಫೋನ್ ಮಾಡುತ್ತಿದ್ದ.
ಕೇಂದ್ರದ ಪ್ರಮುಖ ವಸತಿ ಯೋಜನೆಯಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ತಮಗೆ ಪ್ರಮುಖ ಪಾತ್ರ ನೀಡುತ್ತೇವೆಂದು ದೆಹಲಿಯ ಬಿಜೆಪಿ ಶಾಸಕನಿಗೆ ರಾಥೋಡ್ ಈಗಾಗಲೇ ಮೋಸ ಮಾಡಿದ್ದ.
ಶಾಸಕರ ದೂರಿನ ಮೇರೆಗೆ ಅವನನ್ನು ಬಂಧಿಸಲಾಗಿತ್ತು. ಈ ವರ್ಷದ ಜನವರಿಯಲ್ಲಿ ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.