ಶನಿವಾರದಂದು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಮೊದಲ ಸಂಪುಟ ಸಭೆಯಲ್ಲಿಯೇ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ.
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಗೃಹಜ್ಯೋತಿ ಯೋಜನೆ ಅಡಿ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಅಡಿ ಮನೆ ಒಡತಿಗೆ ಪ್ರತಿ ತಿಂಗಳು 2000 ರೂಪಾಯಿ, ಯುವ ನಿಧಿ ಯೋಜನೆ ಅಡಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮೋ ಪದವೀಧರರಿಗೆ 1500 ರೂಪಾಯಿ ನಿರುದ್ಯೋಗ ಭತ್ಯೆ, ಉಚಿತ ಪ್ರಯಾಣ ನಮ್ಮ ಪ್ರಮಾಣ ಯೋಜನೆ ಅಡಿ ಮಹಿಳೆಯರಿಗೆ ಬಸ್ ಸಂಚಾರ ಉಚಿತ ಹಾಗೂ ಅನ್ನಭಾಗ್ಯ ಯೋಜನೆ ಅಡಿ ಬಡವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಅಕ್ಕಿ ವಿತರಣೆಗೆ ಈಗಾಗಲೇ ಆದೇಶ ಹೊರ ಬಿದ್ದಿದ್ದು, ಇನ್ನುಳಿದ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅನುಷ್ಠಾನಕ್ಕೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದ್ದು, ಇದರ ಜೊತೆಗೆ ಜುಲೈನಲ್ಲಿ 2023 – 24 ನೇ ಸಾಲಿಗೆ ಹೊಸ ಬಜೆಟ್ ಮಂಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಸರ್ಕಾರ 3.10 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡಿಸಿದ್ದು, ತಮ್ಮ ಸರ್ಕಾರ 3.25 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲಿದೆ. ಇದರಿಂದ ಗ್ಯಾರಂಟಿಗಳ ಜಾರಿಗೆ ಹದಿನೈದು ಸಾವಿರ ಕೋಟಿ ರೂಪಾಯಿ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.