ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಾದ ಬದಲಾವಣೆಗಳನ್ನು ಕೈಬಿಟ್ಟು ಸಂವಿಧಾನದ ಆಶಯದಂತೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಜಾರಿಗೆ ರಾಜ್ಯ ಶಿಕ್ಷಣ ನೀತಿ ರೂಪಿಸಿ ಜಾರಿಗೊಳಿಸಬೇಕೆಂದು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಮನ್ವಯ ವೇದಿಕೆ ನೂತನ ಕಾಂಗ್ರೆಸ್ ಸರ್ಕಾರದ ನಿಯೋಜಿತ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ವೇದಿಕೆಯ ಸಂಸ್ಥಾಪಕ ಪೋಷಕ ಶಿಕ್ಷಣ ತಜ್ಞ ವಿ.ಪಿ. ನಿರಂಜನರಾಧ್ಯ ಈ ಸಂಬಂಧ ಪತ್ರ ಬರೆದಿದ್ದು, ರಾಜ್ಯದಲ್ಲಿ ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ -2020 ನೀತಿ, ಶಾಲಾ ಪಠ್ಯ ಪರಿಷ್ಕರಣೆ ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಆದ ಬದಲಾವಣೆಗಳನ್ನು ಕೈಬಿಡಬೇಕು. ಸಂವಿಧಾನದ ಆಶಯದಂತೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು. ಇದಕ್ಕಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಬೇಕು ಎಂದು ಹೇಳಲಾಗಿದೆ.
ಬಿಜೆಪಿ ಸರ್ಕಾರ ರಾಜಕೀಯಕ್ಕಾಗಿ ಶಿಕ್ಷಣ ಕ್ಷೇತ್ರ ಬಳಸಿಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಆಗುವವರೆಗೆ ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯ ಪರಿಷ್ಕರಣೆ ಕೈ ಬಿಟ್ಟು 2017 -18 ರಲ್ಲಿ ಜಾರಿಯಲ್ಲಿದ್ದ ಪಠ್ಯಕ್ರಮ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ. ಹಿಂದಿನ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ಚಕ್ರತೀರ್ಥ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.