ಕಿರುತೆರೆಯ ಪ್ರಸಿದ್ಧ ನಟಿ ದೀಪಿಕಾ ಕಕ್ಕರ್ ಈಗ ತುಂಬು ಗರ್ಭಿಣಿ. ಆಕೆ ಗರ್ಭಾವಸ್ಥೆಯಲ್ಲಿ ಕಾಡುವ ಮಧುಮೇಹದಿಂದ ಬಳಲುತ್ತಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಖುದ್ದು ದೀಪಿಕಾ ಈ ವಿಷಯ ಹಂಚಿಕೊಂಡಿದ್ದಾರೆ. ದೀಪಿಕಾ ತಮ್ಮ ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ರತಿಯೊಬ್ಬ ಗರ್ಭಿಣಿಯರು ಈ ಸಮಸ್ಯೆಯ ಬಗ್ಗೆ ತಿಳಿದಿರಬೇಕು. ಇದರ ಗುಣಲಕ್ಷಣಗಳು ಮತ್ತು ನಿಯಂತ್ರಣದ ಬಗ್ಗೆ ಮಾಹಿತಿ ಪಡೆದಿರಬೇಕು.
ಗರ್ಭಾವಸ್ಥೆಯ ಮಧುಮೇಹ ಎಂದರೇನು ?
ಗರ್ಭಾವಸ್ಥೆಯ ಮಧುಮೇಹವು ಗರ್ಭಿಣಿಯರನ್ನ ಕಾಡುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್ ಮತ್ತು ಈ ಶಕ್ತಿಯನ್ನು ನಮ್ಮ ದೇಹವು ಅನೇಕ ಕಾರ್ಯಗಳಿಗೆ ಬಳಸುತ್ತದೆ.
ಗರ್ಭಾವಸ್ಥೆಯ ಮಧುಮೇಹ ಏಕೆ ಸಂಭವಿಸುತ್ತದೆ ?
ಗರ್ಭಾವಸ್ಥೆಯ ಮಧುಮೇಹ ಏಕೆ ಬರುತ್ತದೆ ಎಂಬುದನ್ನು ಯಾವುದೇ ಸಂಶೋಧನೆಯು ಖಚಿತವಾಗಿ ಹೇಳಿಲ್ಲ. ಆದರೆ ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳು ದೊಡ್ಡ ಮಟ್ಟದಲ್ಲಿ ಸಂಭವಿಸುತ್ತವೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯನ್ನು ಪರಿಣಾಮಕಾರಿಯಾಗಿ ಸಂಸ್ಕರಿಸಲಾಗುವುದಿಲ್ಲ. ಪರಿಣಾಮವಾಗಿ, ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ಹೆರಿಗೆಯ ನಂತರ ಸಾಮಾನ್ಯ ಸ್ಥಿತಿಗೆ ಮರಳುತ್ತಾರೆ. ಆದರೆ ಅವರು ಟೈಪ್ 2 ಮಧುಮೇಹಕ್ಕೆ ತುತ್ತಾಗುವ ಅಪಾಯವಿರುತ್ತದೆ. ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಔಷಧಿಗಳ ಮೂಲಕ ಗರ್ಭಾವಸ್ಥೆಯ ಮಧುಮೇಹವನ್ನು ನಿಯಂತ್ರಿಸಬಹುದು.
ಗರ್ಭಾವಸ್ಥೆಯ ಮಧುಮೇಹದ ಲಕ್ಷಣಗಳು
ಗರ್ಭಾವಸ್ಥೆಯ ಮಧುಮೇಹವು ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ, ಆದಾಗ್ಯೂ ಅತಿಯಾದ ಬಾಯಾರಿಕೆ, ಅತಿಯಾದ ಮೂತ್ರ ವಿಸರ್ಜನೆ ಅದರ ಆರಂಭಿಕ ಚಿಹ್ನೆಗಳಾಗಿರಬಹುದು. ತಕ್ಷಣ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಬೇಕು.