ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ದೆಹಲಿಗೆ 7.30ರ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಲಾಗಿತ್ತು.
ಏರ್ ಇಂಡಿಯಾ ವಿಮಾನದ ಟಿಕೆಟ್ ಬುಕ್ ಮಾಡಲಾಗಿದ್ದು, ಆದರೆ, ಆರೋಗ್ಯ ಸಮಸ್ಯೆ ಕಾರಣ ಕೊನೆ ಕ್ಷಣದಲ್ಲಿ ದೆಹಲಿ ಪ್ರವಾಸವನ್ನು ಡಿಕೆಶಿ ರದ್ದುಗೊಳಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಡಿಕೆಶಿ ಬೆಂಬಲಿಗರಿಗೆ ಬೇಸರವಾಗಿದೆ.
ಡಿ.ಕೆ. ಶಿವಕುಮಾರ್ ಹೊಟ್ಟೆಯ ಸೋಂಕು ಕಾರಣ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ನನಗೆ ಹೊಟ್ಟೆಯ ಸೋಂಕು ಇದೆ ಮತ್ತು ಇಂದು ದೆಹಲಿಗೆ ಪ್ರಯಾಣಿಸುವುದಿಲ್ಲ. 135 ಕಾಂಗ್ರೆಸ್ ಶಾಸಕರಿದ್ದಾರೆ. ನನ್ನ ಬಳಿ ಯಾವುದೇ ಶಾಸಕರಿಲ್ಲ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.
ನನಗೆ ಸಮಯದ ಪ್ರಜ್ಞೆ ಇದೆ, ಹೋರಾಟದ ಕಿಚ್ಚು ಇದೆ. ಹೋರಾಟದಲ್ಲಿ ಯಶಸ್ಸು ಸಿಗಬೇಕಾದರೆ ತಾಳ್ಮೆ ಇರಬೇಕು. ಧರ್ಮರಾಯರಂತೆ ತಾಳ್ಮೆ ಇರಬೇಕು ಎಂದು ಹೇಳಿದ್ದಾರೆ.
ನನ್ನ ಬಳಿ ಶಾಸಕರು ಇಲ್ಲ. ಯಾರನ್ನು ದೆಹಲಿಗೆ ಕರೆದುಕೊಂಡು ಹೋಗುವುದಿಲ್ಲ. ನನಗೆ ಯಾರ ಬೆಂಬಲವೂ ಬೇಡ. ಎಷ್ಟು ಜನರನ್ನಾದರೂ ಅವರು ಕರೆದುಕೊಂಡು ಹೋಗಲಿ. ನನ್ನನ್ನು ಬಂಡೆ ಎಂದು ನೀವು ಕರೆದಿದ್ದೀರಿ. ಬಂಡೆ ಎಂದರೆ ಪ್ರಕೃತಿ. ನನ್ನ ಬಳಿ ಯಾವುದೇ ನಂಬರ್ ಇಲ್ಲ. ನನ್ನದು 135 ನಂಬರ್. ನನ್ನ ಬಳಿ 135 ಶಾಸಕರಿದ್ದಾರೆ. ಎಲ್ಲರೂ ಕಾಂಗ್ರೆಸ್ ಶಾಸಕರು. ನನಗೆ ಹೊಟ್ಟೆಯಲ್ಲಿ ಸಮಸ್ಯೆಯಾಗಿದೆ ವಿಶ್ರಾಂತಿ ಬೇಕಿದೆ ಎಂದು ಹೇಳಿದ್ದಾರೆ.