ಚಂಡೀಗಢ: ಕಚೇರಿಗಳಲ್ಲಿ ಮದ್ಯಪಾನ ಮಾಡಬಹುದು ಎಂಬ ನಿಯಮವನ್ನು ಸರ್ಕಾರವೆ ಜಾರಿಗೊಳಿಸಿದರೆ ನಂಬಲು ಸಾಧ್ಯವೆ? ಭಾರತದಲ್ಲಿ ಅಂತೂ ಇದು ಸಾಧ್ಯವೇ ಇಲ್ಲ ಎನ್ನುವವರೇ ಹೆಚ್ಚು.
ಆದರೆ ಹರಿಯಾಣದ ಸರ್ಕಾರ ಮದ್ಯ ಪ್ರಿಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಕಾರ್ಪೊರೇಟ್ ಕಚೇರಿಯಲ್ಲಿ ಕೆಲಸ ಮಾಡುತ್ತ ಸಹೋದ್ಯೋಗಿಗಳೊಂದಿಗೆ ಮದ್ಯಪಾನ ಮಾಡಬಹುದು ಎಂದು ಸರ್ಕಾರ ಹೇಳಿದೆ…!
ಹರಿಯಾಣ ಮದ್ಯ ನೀತಿಯ ಪ್ರಕಾರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದಂತೆ ಜೂನ್ 12 ರಿಂದ ರಾಜ್ಯಾದ್ಯಂತ ದೊಡ್ಡ ಕಾರ್ಪೊರೇಟ್ ಕಚೇರಿಗಳಲ್ಲಿ ಕಡಿಮೆ ಕಂಟೆಂಟ್ ಆಲ್ಕೋಹಾಲ್ ಪಾನೀಯಗಳಾದ ಬಿಯರ್, ವೈನ್ ಮತ್ತು ರೆಡಿ ಟು ಡ್ರಿಂಕ್ಸ್ ಸೇವನೆಗೆ ಸರ್ಕಾರ ಅನುಮತಿ ನೀಡಿದೆ. ಹರಿಯಾಣ ಮದ್ಯ ನೀತಿಯ ಈ ಹೊಸ ನಿಯಮವನ್ನು ಮೇ 9 ರಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದಕ್ಕೆ ಒಂದು ಷರತ್ತು ಇದೆ. ಅದೇನೆಂದರೆ, ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರುವ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಗಳು ಬಿಯರ್ ಹಾಗೂ ವೈನ್‌ನಂತಹ ಪಾನೀಯಗಳನ್ನು ಸೇವಿಸಬಹುದು.
ಒಂದು ಲಕ್ಷ ಚದರ ಅಡಿ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಒಂದೇ ಆವರಣದೊಳಗೆ ಮದ್ಯಪಾನಕ್ಕೆ ಅನುಮತಿ ನೀಡಲಾಗುತ್ತಿದೆ. ಇದರರ್ಥ ನೀವು ದೊಡ್ಡ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೆ ಕಚೇರಿಯ ಆವರಣದಲ್ಲಿ ಬಿಯರ್ ಅಥವಾ ವೈನ್ ಕುಡಿಯಬಹುದು. ಇವುಗಳನ್ನು ಕಚೇರಿಯಲ್ಲಿಯೇ ನೀಡಬೇಕು ಎಂದೇನಿಲ್ಲ. ನೀವು ಸ್ವಂತವಾಗಿಯೂ ಖರೀದಿಸಿ ಕಚೇರಿಯಲ್ಲಿ ಸೇವನೆ ಮಾಡಬಹುದು.