
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲನ್ನು ಕಂಡಿದ್ದು, ಕೇವಲ 66 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಪ್ರಸ್ತುತ 120 ಶಾಸಕರ ಬಲವನ್ನು ಹೊಂದಿದ್ದ ಬಿಜೆಪಿ ಬರೋಬ್ಬರಿ 54 ಸ್ಥಾನಗಳನ್ನು ಕಳೆದುಕೊಂಡಿದೆ.
ಅತ್ತ ಪ್ರತಿ ಚುನಾವಣೆಯಲ್ಲೂ ನಿರಾಸೆ ಅನುಭವಿಸುತ್ತಿದ್ದ ಕಾಂಗ್ರೆಸ್ ಪಕ್ಷ 135 ಸ್ಥಾನಗಳೊಂದಿಗೆ ಈ ಬಾರಿ ಸ್ಪಷ್ಟ ಬಹುಮತ ಪಡೆದಿದ್ದು, ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಪ್ರಸ್ತುತ 69 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷ ಹೆಚ್ಚುವರಿಯಾಗಿ 66 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.
ಬಹುತೇಕ ಬಾರಿ ಕಿಂಗ್ ಮೇಕರ್ ಪಾತ್ರ ನಿರ್ವಹಿಸುತ್ತಿದ್ದ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ತೀವ್ರ ನಿರಾಸೆಯನ್ನು ಅನುಭವಿಸಿದ್ದು 19 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿದೆ. ಪ್ರಸ್ತುತ 32 ಶಾಸಕರುಗಳನ್ನು ಹೊಂದಿದ್ದ ಜೆಡಿಎಸ್ 13 ಕ್ಷೇತ್ರಗಳನ್ನು ಈಗ ಕಳೆದುಕೊಂಡಿದೆ.
ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಘಟಾನುಘಟಿ ನಾಯಕರು ಆಗಮಿಸಿದ್ದರೂ ಸಹ ಮತದಾರ ಮಾತ್ರ ಇದಕ್ಕೆ ಮಣೆ ಹಾಕಿಲ್ಲ. ಬಿಜೆಪಿ ಸೋಲಿನ ಬೆನ್ನಲ್ಲೇ ಈಗ ಹಲವು ವಿಶ್ಲೇಷಣೆಗಳು ನಡೆಯುತ್ತಿವೆ.
ಪ್ರತಿ ಚುನಾವಣೆಯಲ್ಲೂ ಬಿಜೆಪಿಯ ಬೆಂಬಲಕ್ಕೆ ನಿಲ್ಲುತ್ತಿದ್ದ ಲಿಂಗಾಯತ ಮತದಾರರು ಈ ಬಾರಿ ಕಾಂಗ್ರೆಸ್ ಪರ ವಾಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ 51 ಲಿಂಗಾಯಿತ ಅಭ್ಯರ್ಥಿಗಳ ಪೈಕಿ 39 ಮಂದಿ ಆಯ್ಕೆಯಾಗಿದ್ದು, ಲಿಂಗಾಯತ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪನವರನ್ನು ವಯಸ್ಸಿನ ಕಾರಣ ಹೇಳಿ ಪಟ್ಟದಿಂದ ಕೆಳಗಿಳಿಸಿದ ಬಿಜೆಪಿ, ಚುನಾವಣೆಯಲ್ಲಿ ಮಾತ್ರ ಅವರನ್ನು ಬಳಸಿಕೊಂಡಿದ್ದು ಲಿಂಗಾಯತ ಮತದಾರರು ದೂರ ಸರಿಯಲು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ ಲಿಂಗಾಯತ ನಾಯಕರಾದ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿದ್ದು ಸಹ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.