ಕಾಡಾನೆಗೆ ತೊಂದರೆ ನೀಡ್ತಿದ್ದ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆನೆಗೆ ತೊಂದರೆ ನೀಡ್ತಿದ್ದ ವಿಡಿಯೋ ವೈರಲ್ ಆದ ನಂತರ ಧರ್ಮಪುರಿಯ ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್ಒ) ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವೀಟ್ನಲ್ಲಿ ಬಹಿರಂಗಪಡಿಸಿದ್ದಾರೆ.
ವ್ಯಕ್ತಿಯ ವಿಡಿಯೋನ IFS ಅಧಿಕಾರಿ ಸಾಕೇತ್ ಬಡೋಲಾ ಅವರು ಒಂದು ದಿನದ ಹಿಂದೆ ಟ್ವೀಟ್ ಮಾಡಿದ್ದರು.
ವ್ಯಕ್ತಿಯನ್ನು “ಮೂರ್ಖ” ಎಂದು ಬಣ್ಣಿಸಿದ್ದ ಸಾಕೇತ್ ಬಡೋಲಾ ಅವರು ಕಾಡಾನೆಯನ್ನು ರಸ್ತೆ ಬದಿ ಕೆರಳಿಸಿದ್ದಕ್ಕಾಗಿ ಟೀಕಿಸಿದ್ದರು. ಪ್ರಾಣಿಗಳನ್ನು ಕೆರಳಿಸುವ ಮೂರ್ಖರನ್ನು ಸಹಿಸಿಕೊಳ್ಳುವುದು ಸುಲಭವಲ್ಲ ಎಂದು ವಾಟ್ಸ್ ಅಪ್ ನಲ್ಲಿ ಬಂದಿದ್ದ ವಿಡಿಯೋನ ಹಂಚಿಕೊಂಡಿದ್ದರು.
ಆಕ್ರೋಶಕ್ಕೊಳಗಾಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆ ದಾಟುತ್ತಿದ್ದ ಕಾಡಾನೆಯ ಮುಂದೆ ಹೋಗಿ ಕೈ ಮುಗಿಯುತ್ತಾ ನಿಂತುಕೊಳ್ಳುತ್ತಾನೆ. ಆನೆಯು ಗಾಬರಿಗೊಂಡು ಒಂದು ಹೆಜ್ಜೆ ಹಿಂದೆ ಇಡುತ್ತದೆ. ಆದರೆ ಮನುಷ್ಯ ಮಾತ್ರ ತನ್ನ ಕಾರ್ಯವನ್ನು ನಿಲ್ಲಿಸದೇ ಆನೆಯ ಮುಂದೆ ನಿಂತುಕೊಳ್ಳುತ್ತಾನೆ.