ಗುರುಗ್ರಾಮದಲ್ಲಿ ಐಷಾರಾಮಿ ಕಾರೊಂದು ಅಪಘಾತಕ್ಕೀಡಾಗಿದ್ದು, ಕ್ಷಣಮಾತ್ರದಲ್ಲಿ ಸುಟ್ಟು ಭಸ್ಮವಾಗಿದೆ. ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದಿರೋ ಅವಘಡ ಇದು. ವೇಗವಾಗಿ ಬಂದ ಈ ಐಷಾರಾಮಿ ಪೋರ್ಷೆ ಕಾರು ಮರಕ್ಕೆ ಡಿಕ್ಕಿಯಾಗಿದೆ, ನಂತರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಕಾರು ಸುಟ್ಟು ಬೂದಿಯಾಯಿತು. ಮರಕ್ಕೆ ಡಿಕ್ಕಿ ಹೊಡೆಯುವ ಮುನ್ನ ಕಾರು ಡಿವೈಡರ್‌ಗೂ ಡಿಕ್ಕಿಯಾಗಿತ್ತು. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ದುಬಾರಿ ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಸುಟ್ಟು ಕರಕಲಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 2 ಕೋಟಿ ಮೌಲ್ಯದ ಈ ಪೋರ್ಷೆ ಕಾರಿಗಿಂತ ಮಾರುತಿ ಮತ್ತು ಟಾಟಾ ನ್ಯಾನೋ ಕಾರು ಬೆಸ್ಟ್ ಅಂತಾ ಅಭಿಪ್ರಾಯಪಟ್ಟಿದ್ದಾರೆ. ಕೆಂಪು ಬಣ್ಣದ ಪೋರ್ಷೆ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಐಷಾರಾಮಿ ಸ್ಪೋರ್ಟ್ಸ್ ಕಾರಿನ ಬೆಲೆ ಸುಮಾರು 2 ಕೋಟಿ ಎಂದು ಹೇಳಲಾಗುತ್ತಿದೆ. ಕಾರು ಗಾಲ್ಫ್ ಕೋರ್ಸ್ ರಸ್ತೆಯ ಸೆಕ್ಟರ್ 56 ರಿಂದ ಸಿಕಂದರಪುರ ಕಡೆಗೆ ಹೋಗುತ್ತಿತ್ತು.
ಸೆಕ್ಟರ್ 27ರಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದು ಸರ್ವೀಸ್ ಲೇನ್ ಮೇಲೆ ಬಿದ್ದಿದೆ. ಸರ್ವಿಸ್ ಲೇನ್ ಮೇಲೆ ಬಿದ್ದ ವಾಹನ ಮರಕ್ಕೆ ಡಿಕ್ಕಿ ಹೊಡೆದು ಪಕ್ಕಕ್ಕೆ ಹೋದ ತಕ್ಷಣ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.ಇದು ಪೋರ್ಷೆ ಜರ್ಮನಿ 911 ಸ್ಪೋರ್ಟ್ಸ್ ಕಾರು. ಈ ಕಾರಿನ ಸ್ಥಿತಿ ನೋಡಿ ಜನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಮಾರುತಿ ಕಾರು ಈ ರೀತಿ ಅಪಘಾತಕ್ಕೀಡಾಗಿದ್ದರೆ ಎಲ್ಲರೂ ಸುರಕ್ಷತಾ ಮಾನದಂಡಗಳ ಬಗ್ಗೆ ಭಾಷಣ ಬಿಗಿಯುತ್ತಿದ್ದರು. ಪೋರ್ಷೆ ಆಗಿದ್ದರಿಂದ ಯಾರೂ ಏನೂ ಮಾತನಾಡುತ್ತಿಲ್ಲ ಎಂದು ಓರ್ವ ಕಮೆಂಟ್ ಮಾಡಿದ್ದಾರೆ. ಪೋರ್ಷೆ ಬದಲು ಟಾಟಾ ನ್ಯಾನೋ ಕಾರಾಗಿದ್ದರೆ ಏನೂ ಆಗುತ್ತಿರಲಿಲ್ಲ ಅಂತಾ ಹಲವರು ಅಭಿಪ್ರಾಯಪಟ್ಟಿದ್ದಾರೆ.