ದೇಶದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಉನ್ನತ ನ್ಯಾಯಾಲಯವು 10 ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿದ ನಂತರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ನಿಟ್ಟಿನಲ್ಲಿ ಶಾಸಕಾಂಗವು ಮಾತ್ರ ಕಾನೂನನ್ನು ಅಂಗೀಕರಿಸಬಹುದು ಎಂದು ಕೇಂದ್ರವು ವಾದಿಸಿದೆ.
ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಎಸ್ ಆರ್ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ, ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಎ ಎಂ ಸಿಂಘ್ವಿ, ರಾಜು ರಾಮಚಂದ್ರನ್, ಕೆ ವಿ ವಿಶ್ವನಾಥನ್, ಆನಂದ್ ಗ್ರೋವರ್ ಮತ್ತು ಸೌರಭ್ ಕಿರ್ಪಾಲ್ ಅವರು ಸಲ್ಲಿಸಿದ ಮರು ವಾದವನ್ನು ಆಲಿಸಿತು.
ಸಲಿಂಗ ವಿವಾಹದ ವಿಷಯದ ಬಗ್ಗೆ ಏಳು ರಾಜ್ಯಗಳಿಂದ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತ್ತು ಮತ್ತು ರಾಜಸ್ಥಾನ, ಆಂಧ್ರ ಪ್ರದೇಶ ಮತ್ತು ಅಸ್ಸಾಂ ಸರ್ಕಾರಗಳು ಅಂತಹ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಅರ್ಜಿದಾರರ ವಾದವನ್ನು ವಿರೋಧಿಸಿವೆ.