ಭ್ರಷ್ಟಾಚಾರದ ಪ್ರಕಾರದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಮಂಗಳವಾರದಂದು ಇಸ್ಲಾಮಾಬಾದ್ ನ್ಯಾಯಾಲಯದ ಮುಂದೆ ನಾಟಕೀಯವಾಗಿ ಬಂಧಿಸಿದ ಬಳಿಕ ಪಾಕಿಸ್ತಾನದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಇಮ್ರಾನ್ ಬೆಂಬಲಿಗರು ದೇಶದಾದ್ಯಂತ ಹಲವು ಭಾಗಗಳಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್, ಟ್ವಿಟ್ಟರ್ ಹಾಗೂ ಫೇಸ್ಬುಕ್ ಗಳ ಮೇಲೆ ನಿಷೇಧ ಹೇರಲಾಗಿದ್ದು, ಜೊತೆಗೆ ಮೂರು ವೆಬ್ಸೈಟ್ ಹಾಗೂ ಸ್ಥಳೀಯ ಮಾಧ್ಯಮಗಳನ್ನು ಸಹ ನಿರ್ಬಂಧಿಸಲಾಗಿದೆ. ಅಲ್ಲದೆ ವಿವಿಧ ಭಾಗಗಳಲ್ಲಿ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಕಾರ್ಯಕರ್ತರು ಪೊಲೀಸರ ಜೊತೆ ಸಂಘರ್ಷಕ್ಕೆ ಇಳಿದಿದ್ದು, ನೂರಾರು ಮಂದಿಯನ್ನು ಬಂಧಿಸಲಾಗಿದೆ.
ತಮ್ಮ ನಾಯಕನ ಬಂಧನ ವಿರೋಧಿಸಿ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು ಕನಿಷ್ಠ ಮೂರು ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದು, ಹಲವೆಡೆ ರಸ್ತೆ ತಡೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು, ಜಲ ಫಿರಂಗಿ ಪ್ರಯೋಗಿಸಿದ್ದು, ಈವರೆಗೆ ನಾಲ್ಕು ಮಂದಿ ಮೃತಪಟ್ಟು 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಲ್ಲಲ್ಲಿ ಬೆಂಕಿ ಹಚ್ಚುತ್ತಿರುವ ಪ್ರಕರಣಗಳು ಮುಂದುವರೆದಿದೆ.
ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್ನ್ಯಾಷನಲ್, ಇದು ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾರ್ಯ ಎಂದು ಆರೋಪಿಸಿದೆ. ಇದೀಗ ಇಂಟರ್ನೆಟ್ ಸಂಪರ್ಕವನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದ್ದು, ಈಗಾಗಲೇ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನದ ಜನತೆ ಈಗ ನಡೆಯುತ್ತಿರುವ ಗಲಭೆಗಳಿಂದಾಗಿ ಮತ್ತಷ್ಟು ಹೈರಾಣಾಗಿ ಹೋಗಿದ್ದಾರೆ.