ಗುಜರಾತಿನ ಸೂರತ್ ನಗರದಲ್ಲಿ ವಜ್ರದ ವ್ಯಾಪಾರಿಯೊಬ್ಬರಿಗೆ 32 ಲಕ್ಷ ರೂಪಾಯಿ ಮೌಲ್ಯದ ವಜ್ರವನ್ನು ಗುಟ್ಕಾ ಪ್ಯಾಕೆಟ್‌ಗಳಿಗೆ ಬದಲಿಸಿ ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಆರೋಪಿ ರಾಹೀಲ್ ಮಂಜನಿ ಎಂಬಾತ ವಜ್ರದ ದಲ್ಲಾಳಿಯಂತೆ ಪೋಸ್ ನೀಡಿ ಪಾಲಿಷ್ ಮಾಡಿದ, ದುಂಡಗಿನ ಮತ್ತು ನೈಸರ್ಗಿಕ ಗುಣಮಟ್ಟದ 32.04 ಲಕ್ಷ ರೂಪಾಯಿ ಮೌಲ್ಯದ ವಜ್ರಗಳನ್ನು ಮತ್ತೊಬ್ಬ ವ್ಯಾಪಾರಿಗೆ ಮಾರಾಟ ಮಾಡುವ ನೆಪದಲ್ಲಿ ರುಷಭ್ ವೋರಾ ಅವರ ಕಚೇರಿಯಿಂದ ಪಡೆದಿದ್ದ.
ದಲ್ಲಾಳಿ ಮಂಜನಿಯು ಫೆಬ್ರವರಿ 13 ರಿಂದ ಫೆಬ್ರವರಿ 21 ರ ನಡುವೆ ಮೂರು ಸೀಲ್ಡ್ ಪಾರ್ಸೆಲ್‌ಗಳಲ್ಲಿ ವಜ್ರಗಳನ್ನು ಪಡೆದು ಮುಂಗಡ ಹಣವಾಗಿ ರುಷಭ್‌ಗೆ 2 ಲಕ್ಷ ರೂ. ನೀಡಿದ್ದ. ಉಳಿದ ಹಣವನ್ನು ಮೂರ್ನಾಲ್ಕು ದಿನಗಳಲ್ಲಿ ನೀಡುವುದಾಗಿ ಆರೋಪಿ ಹೇಳಿದ್ದಾಗಿ ರುಷಭ್ ಹೇಳಿದ್ದಾರೆ. ಆದರೆ ಉಳಿದ ಹಣ ಪಾವತಿಯಾಗದಿದ್ದಾಗ ರುಷಭ್ ವೋರಾ ಬ್ರೋಕರ್ ನೀಡಿದ್ದ ಪಾರ್ಸೆಲ್‌ಗಳನ್ನು ತೆರೆದು ನೋಡಿದಾಗ ವಜ್ರದ ಬದಲಿಗೆ ಗುಟ್ಕಾ ಪ್ಯಾಕೆಟ್‌ಗಳು ಪತ್ತೆಯಾಗಿವೆ.
ಆರೋಪಿಗಳು ವಜ್ರದ ಬದಲಿಗೆ ಗುಟ್ಕಾ ನೀಡಲು ಮತ್ತೊಬ್ಬ ವಜ್ರದ ವ್ಯಾಪಾರಿಯೊಂದಿಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 ಮತ್ತು 409 ರ ಅಡಿಯಲ್ಲಿ ವಂಚನೆ ಮತ್ತು ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಆರೋಪ ಹೊರಿಸಲಾಗಿದೆ. ಪೊಲೀಸ್ ವರದಿಗಳ ಪ್ರಕಾರ ಇತರ ವ್ಯಾಪಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ತನಿಖೆ ನಡೆಯುತ್ತಿದೆ.