ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು, ಬಹಿರಂಗ ಪ್ರಚಾರಕ್ಕೆ ಸೋಮವಾರ ಕೊನೆಯ ದಿನವಾಗಿದೆ.
ಜಿದ್ದಾಜಿದ್ದಿನ ಕದನವಾಗಿರುವ ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸಬಹುದು ಎಂಬುದು ಕುತೂಹಲ ಮೂಡಿಸಿದೆ. ಅಲ್ಲದೆ ಯಾರು ಸಿಎಂ ಆಗಿ ಆಯ್ಕೆಯಾಗುತ್ತಾರೆ ಎಂಬ ಕುತೂಹಲವೂ ಇದೆ.
ಆದರೆ, ಇಲ್ಲಿಯವರೆಗೆ ಅದೆಷ್ಟೋ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಆದರೆ, ಐದು ವರ್ಷ ಕಾಲ ರಾಜ್ಯಭಾರ ಮಾಡಿದ್ದು ಮಾತ್ರ ಕೇವಲ ಮೂವರೇ ಮುಖ್ಯಮಂತ್ರಿಗಳು. ಹಾಗಿದ್ದರೆ, ಯಾರು ಆ ಮೂವರು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಎಸ್. ನಿಜಲಿಂಗಪ್ಪ
ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರು ಎರಡು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮೊದಲು 1956 ಮತ್ತು 1958 ರ ನಡುವೆ ಸಿಎಂ ಆಗಿ ಸೇವೆ ಸಲ್ಲಿಸಿದ್ದರೆ, ಬಳಿಕ 1962 ರಿಂದ 1968 ರವರೆಗೆ (ಪೂರ್ಣ ಅವಧಿ) ಅಧಿಕಾರ ನಡೆಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರು ಬಳ್ಳಾರಿ ಜಿಲ್ಲೆಯಲ್ಲಿ 1902 ರಲ್ಲಿ ಜನಿಸಿದರು. ನಿಜಲಿಂಗಪ್ಪ ಅವರನ್ನು ಆಧುನಿಕ ಕರ್ನಾಟಕದ ಮೇಕರ್ ಎಂದೂ ಕರೆಯುತ್ತಾರೆ. 1926ರಲ್ಲಿ ಎಸ್. ನಿಜಲಿಂಗಪ್ಪ ಅವರು ಕಾನೂನು ಪದವಿ ಪಡೆದಿದ್ದರು.
ನಿಜಲಿಂಗಪ್ಪ ಅವರ ರಾಜಕೀಯ ಜೀವನವು 1936 ರಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದಾಗ ಪ್ರಾರಂಭವಾಯಿತು. ಅದಕ್ಕೂ ಮುನ್ನ ಅವರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ತೀವ್ರ ಆಸಕ್ತಿ ಹೊಂದಿದ್ದರು. ಹಾಗೂ ಕಾಂಗ್ರೆಸ್ ಅಧಿವೇಶನಗಳಲ್ಲಿ ಭಾಗವಹಿಸುತ್ತಿದ್ದರು.
ಅವಿಭಜಿತ ಕಾಂಗ್ರೆಸ್‌ನ ಕೊನೆಯ ಅಧ್ಯಕ್ಷರೂ ಆಗಿದ್ದರು. ಪಕ್ಷದ ಒಳ ಕಲಹದಿಂದಾಗಿ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ವಿಭಜನೆಯಾದಾಗ, ನಿಜಲಿಂಗಪ್ಪ ಅವರು 1977 ರಲ್ಲಿ ಜನತಾ ಪಕ್ಷದೊಂದಿಗೆ ವಿಲೀನಗೊಂಡ ಕಾಂಗ್ರೆಸ್ (ಒ) ಬಣದ ಮುಖ್ಯಸ್ಥರಾಗಿ ಮುಂದುವರೆದರು.
ಡಿ. ದೇವರಾಜ ಅರಸು
ಕಾಂಗ್ರೆಸ್‌ನಿಂದ ಡಿ. ದೇವರಾಜ್ ಅರಸು ಕರ್ನಾಟಕದಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಮೊದಲನೆಯದಾಗಿ ಮಾರ್ಚ್ 1972ರಿಂದ ಡಿಸೆಂಬರ್ 1977 (ಅವರ ಪೂರ್ಣ ಅವಧಿ) ಯವರೆಗೆ ಸೇವೆ ಸಲ್ಲಿಸಿದರು. ಬಳಿಕ 1978 ರಿಂದ 1980 ರವರೆಗೆ ಅಧಿಕಾರ ನಡೆಸಿದ್ರು. ಪಕ್ಷದ ಒಳ ಸಂಘರ್ಷದ ಸಮಯದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪರವಾಗಿ ನಿಂತರು.
ಭೂಸುಧಾರಣಾ ಕಾಯ್ದೆ ಜಾರಿಗೆ ತಂದ ದೇಶದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರದ್ದು, ಈಗಲೂ ಕೂಡ ಹಿಂದುಳಿದ ವರ್ಗಗಳ ಜನರು ದೇವರಾಜ ಅರಸು ಅವರನ್ನು ನೆನೆಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ದಿವಂಗತ ದೇವರಾಜ ಅರಸು ಅವರು, ವನ್ಯಜೀವಿ, ಪ್ರಕೃತಿ, ಅರಣ್ಯ ಮತ್ತು ಮರಗಳ ಸಂರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಿದ್ದರು.
ಸಿದ್ದರಾಮಯ್ಯ
ಕಾಂಗ್ರೆಸ್ ನ ಪ್ರಮುಖ ನಾಯಕರಾಗಿರುವ ಸಿದ್ದರಾಮಯ್ಯ ಅವರು 2013 ರ ವಿಧಾನಸಭಾ ಚುನಾವಣೆಯಲ್ಲಿ 122/224 ಸ್ಥಾನಗಳ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದರು. ತಮ್ಮ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ, ಸಿದ್ದರಾಮಯ್ಯ ಅವರು 40 ವರ್ಷಗಳಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸಿದ್ದು ಎಂದೇ ಕರೆಯಲ್ಪಡುವ ಸಿದ್ದರಾಮಯ್ಯ ಅವರು ಪ್ರಸ್ತುತ ವರುಣಾ ಕ್ಷೇತ್ರದಲ್ಲಿ ಬಿಜೆಪಿಯ ವಿ. ಸೋಮಣ್ಣ ಅವರನ್ನು ಎದುರಿಸಲಿದ್ದಾರೆ. 75ರ ಹರೆಯದ ಸಿದ್ದರಾಮಯ್ಯನವರು ಇತ್ತೀಚೆಗಷ್ಟೇ ಇದು ತಮ್ಮ ಕೊನೆಯ ಚುನಾವಣೆಯಾಗಿದ್ದು, ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಕಾಂಗ್ರೆಸ್ ನಾಯಕರೊಬ್ಬರು ತಮ್ಮ ನಿವೃತ್ತಿಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಇದು ನನ್ನ ಕೊನೆಯ ಚುನಾವಣೆ. ನನಗೆ ಒಂದು ಅವಕಾಶ ನೀಡಿ ಎಂದಿದ್ದಾರೆ. ಅವರು ಎಂತಹ ದಯನೀಯ ಸ್ಥಿತಿಯನ್ನು ತಲುಪಿದ್ದಾರೆ ಎಂದು ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ಒಟ್ಟಾರೆಯಾಗಿ, ಸಂಪೂರ್ಣ ಅವಧಿಗೆ ಮುಖ್ಯಮಂತ್ರಿ ಆಸನದಲ್ಲಿ ಕುಳಿತುಕೊಳ್ಳಲು ಯಶಸ್ವಿಯಾದ ಮೂವರೂ ಸಿಎಂಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಕರ್ನಾಟಕದ ಜನರು ಮತ್ತೊಬ್ಬ ಕಾಂಗ್ರೆಸ್ ನಾಯಕನಿಗೆ ಪೂರ್ಣಾವಧಿಯನ್ನು ನೀಡುತ್ತಾರೆಯೇ ಅಥವಾ ಬಿಜೆಪಿಗೆ ತಮ್ಮ ಮತ ನೀಡುತ್ತಾರೆಯೇ ಅಥವಾ ಸಮ್ಮಿಶ್ರ ಸರ್ಕಾರ ಬರುತ್ತದೆಯೇ ಕಾದು ನೋಡಬೇಕಿದೆ.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣಾ ತಮ್ಮ ಅಧಿಕಾರಾವಧಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸುತ್ತ ಬಂದಿದ್ದರಾದರೂ ಸಹ ಅವಧಿಗೂ ಮುನ್ನವೇ ಚುನಾವಣೆಗೆ ಹೋದ ಕಾರಣ ಪೂರ್ಣಾವಧಿ ಆಡಳಿತ ಸಾಧ್ಯವಾಗಲಿಲ್ಲ.