ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಿವಮೊಗ್ಗದಲ್ಲಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರೊಂದಿಗೆ ಸಂವಾದ ನಡೆಸಿದರು.
ಭಾನುವಾರ ಚುನಾವಣೆ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು, ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್ ನಿಂದ ಸ್ಥಳಾಂತರಿಸಲ್ಪಟ್ಟ ಶಿವಮೊಗ್ಗದಲ್ಲಿರುವ ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗದ ಸದಸ್ಯರೊಂದಿಗೆ ಸಂವಾದ ನಡೆಸಿದರು.
ಸಂವಾದ ವೇಳೆ ಹಕ್ಕಿ ಪಿಕ್ಕಿ ಸದಸ್ಯರು ತಮ್ಮ ಸಂಸ್ಕೃತಿಯ ಜನಪ್ರಿಯವಾದ ಜಾನಪದ ಗೀತೆ ಹಾಡಿದ್ದಾರೆ. ಭಾರತಕ್ಕೆ ಮರಳಲು ಕ್ರಮಕೈಗೊಂಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ ಬುಡಕಟ್ಟು ಸದಸ್ಯರಲ್ಲಿ ಒಬ್ಬರು ಯಾವುದೇ ತೊಂದರೆ ಇಲ್ಲದೆ ರಕ್ಷಿಸಲಾಗಿದೆ ಎಂದು ಹೇಳಿದರು.
ಇದಕ್ಕೆ ಮೋದಿ ಅವರು ನಾವು ಯಾವುದೇ ಭಾರತೀಯರನ್ನು ಬಿಡುವುದಿಲ್ಲ. ರಕ್ಷಿಸುತ್ತೇವೆ ಎಂದು ತಿಳಿಸಿದರು.
ಸಂವಾದದ ಸಮಯದಲ್ಲಿ ಹಕ್ಕಿಪಿಕ್ಕಿ ಅವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮೋದಿ ಕೇಳಿದಾಗ, ಸುಡಾನ್ ನಿಂದ ಹಿಂದಿರುಗಿದವರು ತಮ್ಮ ಕಥೆಗಳನ್ನು ಹಂಚಿಕೊಂಡರು ಮತ್ತು ಆಪರೇಷನ್ ಕಾವೇರಿ ಅಡಿಯಲ್ಲಿ ತಮ್ಮ ತಾಯ್ನಾಡಿಗೆ ಕರೆತಂದಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು.
ಪಿಎಂ ಮೋದಿ ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗವನ್ನು ಶ್ಲಾಘಿಸಿದರು. ಮೊಘಲ್ ಚಕ್ರವರ್ತಿ ಅಕ್ಬರ್ ಪ್ರತಿಸ್ಪರ್ಧಿಯಾಗಿದ್ದ ಮೇವಾರ್ ರಾಜ ಮಹಾರಾಣಾ ಪ್ರತಾಪ್‌ಗೆ ಅವರಿಗೆ ಹಕ್ಕಿಪಿಕ್ಕಿ ಪೂರ್ವಜರ ನಿರಂತರ ಬೆಂಬಲದ ಬಗ್ಗೆ ತಿಳಿಸಿದರು.
ತಮ್ಮ ಪರವಾಗಿ ನಿಂತ ದೇಶದ ಶಕ್ತಿಯನ್ನು ಸದಾ ಸ್ಮರಿಸುವಂತೆ ಸಲಹೆ ನೀಡಿದ ಪ್ರಧಾನಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು, ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡಲು ಸದಾ ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದರು.
ವಿದೇಶಗಳಲ್ಲಿನ ಜನರು ಭಾರತೀಯ ಔಷಧದಲ್ಲಿ ನಂಬಿಕೆ ಇಡುತ್ತಾರೆ. ಅವರ ಭಾರತ ಸಂಪರ್ಕದ ಬಗ್ಗೆ ತಿಳಿದುಕೊಂಡು ಸಂತೋಷಪಡುತ್ತಾರೆ ಎಂದು ಚರ್ಚೆಯ ವೇಳೆ ತಿಳಿಸಿದರು.