ದಾವಣಗೆರೆ: ಅಪ್ರಾಪ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಬಾಲ್ಯ ವಿವಾಹ ಮಾಡಿದ ಪೋಷಕರು ಹಾಗೂ ಬಾಲಕಿಯ ಮದುವೆಯಾಗಿದ್ದ ಸೋದರ ಮಾವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತೆ ಮದುವೆಯಾಗಿದ್ದ ವ್ಯಕ್ತಿ ಮತ್ತು ಇಬ್ಬರ ಪೋಷಕರು ವಿರುದ್ಧ ಹದಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ.
ಅಪ್ರಾಪ್ತೆ ಮದುವೆಯಾಗಿರುವ ಜರಿಕಟ್ಟೆ ಗ್ರಾಮದ ಸಂತೋಷ್ ಮತ್ತು ಬಾಲಕಿಯ ತಂದೆ, ತಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೇ 3ರಂದು ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ 16 ವರ್ಷ 9 ತಿಂಗಳ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸಖಿ ಕೇಂದ್ರದಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದಾಗ, 9ನೇ ತರಗತಿ ಓದುತ್ತಿದ್ದ ವೇಳೆ 14 ವರ್ಷ ವಯಸ್ಸಾಗಿದ್ದಾಗ ತಂದೆ, ತಾಯಿ ಸೇರಿ ಸೋದರ ಮಾವನೊಂದಿಗೆ 2021ರ ಮೇ 10ರಂದು ಮದುವೆ ಮಾಡಿಸಿದ್ದಾರೆ. ನಂತರ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.