ಸಾಮಾನ್ಯವಾಗಿ ಪ್ರತಿಯೊಬ್ಬರದ್ದೂ ಈಗ ಒತ್ತಡದ ಬದುಕು. ಪ್ರತಿ ವಸ್ತುವೂ ದುಬಾರಿಯಾಗಿರೋದ್ರಿಂದ ಜೀವನ ನಡೆಸಲು ಎರಡೆರಡು ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಊಟ, ನಿದ್ದೆ, ವ್ಯಾಯಾಮ ಯಾವುದೂ ನಿಗದಿಯಂತೆ ಆಗುವುದೇ ಇಲ್ಲ. ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಈ ಸಮಸ್ಯೆ ನಮ್ಮ ಆಯಸ್ಸನ್ನೇ ಕಡಿಮೆ ಮಾಡಿಬಿಡುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ ಎಚ್ಚರದಿಂದಿರಿ. ಏಕೆಂದರೆ ಇದು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಲು ಓಮ ಸಹಕಾರಿಯಾಗಿದೆ. ಓಮದ ಕಾಳುಗಳಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತವೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯಕ್ಕೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
ಥೈಮಾಲ್ ಎಂಬ ಅಮೂಲ್ಯವಾದ ಕಿಣ್ವವು ಓಮದಲ್ಲಿದೆ. ಇದು ರಕ್ತನಾಳಗಳ ಅಡಚಣೆಯನ್ನು ಕಡಿಮೆ ಮಾಡಬಲ್ಲದು. ಹಾಗಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಓಮವನ್ನು ಬಳಕೆ ಮಾಡಬೇಕು. ಅರ್ಧ ಟೀ ಚಮಚ ಓಮದ ಕಾಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ಅದು ಅರ್ಧ ಲೋಟದಷ್ಟಾದಾಗ ಗ್ಯಾಸ್ ಆಫ್ ಮಾಡ ಅದನ್ನು ಫಿಲ್ಟರ್ ಮಾಡಿಕೊಳ್ಳಿ. ಅಗತ್ಯವಿದ್ದರೆ ಮಾತ್ರ ಅದಕ್ಕೆ ಕೊಂಚ ಉಪ್ಪು ಸೇರಿಸಿಕೊಂಡು ಕುಡಿಯಿರಿ. ಈ ರೀತಿ ಮಾಡುವುದರಿಂದ ಹೈ ಬಿಪಿ ನಿಯಂತ್ರಣಕ್ಕೆ ಬರುತ್ತದೆ.
ನಾಲ್ಕಾರು ಚಮಚಗಳಷ್ಟು ಓಮದ ಕಾಳುಗಳನ್ನು ಡ್ರೈ ರೋಸ್ಟ್ ಮಾಡಿ ಒಂದು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ. ಅದನ್ನು ಪ್ರತಿದಿನ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬಹುದು. ಅಧಿಕ ಬಿಪಿ ರೋಗಿಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನವಿದೆ. ಆಯುರ್ವೇದ ಆಚಾರ್ಯರ ಪ್ರಕಾರ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ನಮ್ಮ ಆಹಾರದಲ್ಲಿ ಓಮವನ್ನು ಬಳಸಬೇಕು. ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿನಲ್ಲಿ ಒಂದು ಚಮಚದಷ್ಟು ಓಮದ ಕಾಳನ್ನು ನೆನೆಸಿಟ್ಟು ಬೆಳಗ್ಗೆ ಅದನ್ನು ಕುಡಿಯಬಹುದು. ಈ ರೀತಿ ಮಾಡುವುದರಿಂದಲೂ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.