ಕೋಲಾರ: ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪತ್ನಿ ಹಾಗೂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಲೂರು ಸಮೀಪದ ಇರಬನಹಳ್ಳಿ ತೋಪಿನಲ್ಲಿ ಐದು ದಿನದ ಹಿಂದೆ ಅಪರಿಚಿತ ಶವ ಕಂಡುಬಂದಿತ್ತು. ಪ್ರಕರಣ ಭೇದಿಸಿದ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಹಾಗೂ ಮಹದೇವಪುರದ ಇಬ್ಬರನ್ನು ಬಂಧಿಸಿದ್ದಾರೆ. ಮೃತಪಟ್ಟ ತಿಮ್ಮಪ್ಪನ ಪತ್ನಿ ಬೆಂಗಳೂರಿನ ಮಹಾದೇವಪುರದ ವಿಜಯಮ್ಮ ಅದೇ ಊರಿನ ಪೆರುಮಾಳ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಲು ಪೆರುಮಾಳ್ ಹಾಗೂ ಮತ್ತೊಬ್ಬ ಆರೋಪಿ ವೆಂಕಟಾಚಲಪತಿ ಜೊತೆ ಸೇರಿ ಸಂಚು ರೂಪಿಸಿದ್ದರು.
ಏಪ್ರಿಲ್ 28ರಂದು ರಾತ್ರಿ ಮದ್ಯದ ಜೊತೆಗೆ ವಿಷ ಬೆರೆಸಿ ತಿಮ್ಮಪ್ಪನಿಗೆ ಕುಡಿಸಿದ್ದಾರೆ. ನಂತರ ಟೆಂಪೋದಲ್ಲಿ ತಿಮ್ಮಪ್ಪನನ್ನು ಮೇಡಹಳ್ಳಿಯ ಮಾರ್ಗವಾಗಿ ಮಾಲೂರಿಗೆ ಕರೆತರುವಾಗ ಉಳಿದಿದ್ದ ವಿಷವನ್ನು ಮತ್ತೆ ಕುಡಿಸಿದ್ದಾರೆ. ತಿಮ್ಮಪ್ಪ ಮೃತಪಟ್ಟ ನಂತರ ಯಶವಂತಪುರ ಅರಣ್ಯ ವ್ಯಾಪ್ತಿಯ ಇರಬನಹಳ್ಳಿ ತೋಪಿನಲ್ಲಿ ಮೃತ ದೇಹ ಎಸೆದು ಪರಾರಿಯಾಗಿದ್ದಾರೆ.
ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಲೂರು ಸಿಪಿಐ ಚಂದ್ರದಾರ್ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಐದೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯವನ್ನು ಕೋಲಾರ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.