ಕಳೆದ ವರ್ಷ ಬಿಡುಗಡೆಯಾದ ರಣಬೀರ್ ಕಪೂರ್ ಅಭಿನಯದ ಚಿತ್ರಗಳಲ್ಲಿ ಶಂಶೇರಾ ಅತ್ಯಂತ ಶೋಚನೀಯ ರೀತಿಯಲ್ಲಿ ಸೋತಿತು. 150 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಬಹುನಿರೀಕ್ಷಿತ ಸಿನಿಮಾ ಶಂಶೇರಾ ಗಳಿಕೆಯಲ್ಲಿ ಮಕಾಡೆ ಮಲಗಿತು.
ತಮ್ಮ ಸಿನಿಮಾ ಸೋಲಿನ ಬಗ್ಗೆ ರಣಬೀರ್ ಸ್ವತಃ ಹಲವು ಬಾರಿ ತಮಾಷೆ ಮಾಡ್ತಿರುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ಅವರ ‘ಶಂಶೇರಾ’ ಚಿತ್ರ ಇಷ್ಟವಾಯಿತು ಎಂದು ಹೇಳಿದಾಗ ಅದೇ ರೀತಿಯ ತಮಾಷೆ ಘಟನೆ ನಡೆಯಿತು.
ವರ್ಚುವಲ್ ಸಂವಾದದ ಸಮಯದಲ್ಲಿ ಮಹಿಳೆಯೊಬ್ಬರು ರಣಬೀರ್ ಅವರಿಗೆ ನಿಮ್ಮ ‘ಶಂಶೇರಾ’ ಚಿತ್ರವನ್ನು ತುಂಬಾ ಇಷ್ಟಪಟ್ಟಿದ್ದಾಗಿ ಹೇಳಿದರು. ಅದನ್ನು ಕೇಳಿದ ನಟ ರಣಬೀರ್ ಕಪೂರ್ ನಗು ತಡೆದುಕೊಳ್ಳಲಾಗದೆ ಕೆನ್ನೆ ಸವರಿ, ‘ನಿಮಗೆ ಶಂಶೇರಾ ಇಷ್ಟವಾದರೆ, ನೀವು ನನ್ನ ಕುರುಡ ಅಭಿಮಾನಿ’ ಎಂದು ಪ್ರತಿಕ್ರಿಯಿಸಿದ್ದಾರೆ.
90 ರ ದಶಕದಲ್ಲಿ ಶಂಶೇರಾ ಚಿತ್ರ ಬಿಡುಗಡೆಯಾಗಿದ್ದರೆ ಸೂಪರ್‌ಹಿಟ್ ಆಗುತ್ತಿತ್ತು ಎಂದು ಅಭಿಮಾನಿ ವಿವರಿಸಿ,ಈಗಲೂ ಅವರು ‘ಶಂಶೇರಾ’ ಪರಿಕಲ್ಪನೆಯನ್ನು ಇಷ್ಟಪಟ್ಟಿರೋದಾಗಿ ತಿಳಿಸಿದರು.