2015ರಲ್ಲಿ ಸಹೋದರನೊಂದಿಗೆ ಫುಟ್ಬಾಲ್ ಆಡುತ್ತಿದ್ದ 22 ವರ್ಷದ ಇಬ್ರಾಹಿಂ ಅಬ್ದುಲ್‌ರೌಫ್ ಒರಟಾದ ಟ್ಯಾಕಲ್ ಒಂದರ ಪರಿಣಾಮ ನೆಲಕ್ಕೆ ಬೀಳುತ್ತಾರೆ. ಇದರ ಬೆನ್ನಿಗೆ ಅವರ ಕಾಲಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.
ಆದರೆ ಕಾಲಿನ ನೋವು ಮರುದಿನವಾದರೂ ಗುಣವಾಗುವ ಲಕ್ಷಣ ಕಾಣದೇ, ಹೆಜ್ಜೆ ಇಟ್ಟಾಗೆಲ್ಲಾ ವಿದ್ಯುತ್ ಶಾಕ್ ತಗುಲಿದಂತೆ ಭಾಸವಾದಾಗ ಬರ್ಮಿಂಗ್‌ಹ್ಯಾಂನ ಆಸ್ಪತ್ರೆಯೊಂದಕ್ಕೆ ದಾಖಲಾಗುತ್ತಾರೆ ಅಬ್ದುಲ್. ಈ ವೇಳೆ ಮೂಳೆಯಲ್ಲಿ ಸೋಂಕು ಕಾಣಿಸಿಕೊಂಡ ಕಾರಣ ಆರು ವಾರಗಳ ಮಟ್ಟಿಗೆ ಸೋಂಕು ನಿವಾರಕ ಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ. ಆದರೆ ಮೂರು ವಾರಗಳ ಪುನಶ್ಚೇತನದ ಬಳಿಕವೂ ಅಬ್ದುಲ್ ಕಾಲಿನಲ್ಲಿ ಯಾವುದೇ ಚೇತರಿಕೆ ಕಾಣುವುದಿಲ್ಲ.
ಅಬ್ದುಲ್ ಕಾಲಿನ ಮೂಳೆಯಲ್ಲಿ ಗಂಟುಗಳು ಇರುವ ಲಕ್ಷಣಗಳು ತೋರುತ್ತಲೇ, ಬರ್ಮಿಂಗ್‌ಹ್ಯಾಂನ ರಾಯಲ್ ಆರ್ಥೋಪೆಡಿಕ್ ಆಸ್ಪತ್ರೆಗೆ ದಾಖಲಾಗಿ ತಪಾಸಣೆ ಮಾಡಿದಾಗ ಆತನಿಗೆ ಮೂಳೆ ಕ್ಯಾನ್ಸರ್ ಇರುವುದು ಕಂಡು ಬಂದಿದೆ.
ಆರು ತಿಂಗಳ ಕಾಲ ಕೆಮೋಥೆರಪಿ ಪಡೆದ ಅಬ್ದುಲ್, ಇದರ ಬೆನ್ನಿಗೆ ರೊಟೇಷನ್‌ಪ್ಲಾಸ್ಟಿ ಎಂಬ ಅಪರೂಪದ ಶಸ್ತ್ರಚಿಕಿತ್ಸೆಯ ಮೂಲಕ ಮಂಡಿಯ ಬಳಿ ಇದ್ದ ಗಂಟುಗಳನ್ನು ಗುಣಪಡಿಸಿಕೊಂಡಿದ್ದಾರೆ. ಇದರ ಬೆನ್ನಿಗೆ ವರ್ಷಗಳ ಮಟ್ಟಿಗೆ ಪುನಶ್ಚೇತನಕ್ಕೆ ಒಳಗಾದ ಬಳಿಕ ಇದೀಗ ಎಂದಿನಂತೆ ಓಡಾಡುತ್ತಿರುವ ಅಬ್ದುಲ್, ಮರಳಿ ಫುಟ್ಬಾಲ್ ಅಂಗಳಕ್ಕೆ ಕಾಲಿಟ್ಟಿದ್ದು, ಎಲ್ಲರಂತೆ ಆಟವನ್ನು ಎಂಜಾಯ್ ಮಾಡುತ್ತಿದ್ದಾರೆ.