ರಿಷಿಕೇಶ: ಉತ್ತರಾಖಂಡದ ಸಚಿವ ಮತ್ತು ಬಿಜೆಪಿ ನಾಯಕ ಪ್ರೇಮಚಂದ್ ಅಗರ್ವಾಲ್ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಹೊಡೆಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ. ಈ ಘಟನೆ ರಿಷಿಕೇಶದಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬಿಜೆಪಿ ಸಚಿವರು ಮತ್ತು ಅವರ ಭದ್ರತಾ ಸಿಬ್ಬಂದಿ ವ್ಯಕ್ತಿಯೊಬ್ಬನನ್ನು ಥಳಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆದ ಬೆನ್ನಲೇ ಸಾಕ್ಷ್ಯ ಮತ್ತು ಸತ್ಯಗಳ ಆಧಾರದ ಮೇಲೆ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಡೆಹ್ರಾಡೂನ್ ಪೊಲೀಸ್ ಅಧೀಕ್ಷಕರಿಗೆ ಸೂಚಿಸಲಾಗಿದೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕ, ಸಚಿವರಿಂದ ಥಳಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಉತ್ತರಾಖಂಡ ಸರ್ಕಾರ ದುರಹಂಕಾರದಿಂದ ವರ್ತಿಸುತ್ತಿದ್ದು, ಸಚಿವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೆ ಸಚಿವರಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಸಂತ್ರಸ್ತರನ್ನು ಭೇಟಿಯಾಗಲು ಕುಟುಂಬಕ್ಕೆ ಸಹ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಶಾಸಕ ಭುವನ್ ಕಪ್ರಿ ಆರೋಪಿಸಿದ್ದಾರೆ.