ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಎರಡೂ ಪಕ್ಷಗಳು ರಾಜ್ಯದ ಜನತೆಗೆ ದ್ರೋಹ ಬಗೆದಿವೆ. ಜಾತಿ ಜಾತಿಗಳ ನಡುವೆ ಒಡಕುಂಟು ಮಾಡುತ್ತಿವೆ. ರೈತರ ಸಮಸ್ಯೆ ಬಗೆಹರಿಸುವಲ್ಲಿ ಎರಡೂ ಪಕ್ಷಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬೈಲವಾಡ ಕ್ರಾಸ್ ಬಳಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್-ಜೆಡಿಎಸ್ ಸರ್ಕಾರದಿಂದಾಗಿ ಜನರು ಬೇಸತ್ತಿದ್ದಾರೆ. ರಾಜ್ಯದೆಲ್ಲೆಡೆ ಡಬಲ್ ಇಂಜಿನ್ ಸರ್ಕಾರದ ಶಂಖನಾದ ಮೊಳಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ಪ್ರವಾಸ ಮಾಡಿದ್ದೇನೆ. ಮಹಿಳೆಯರು, ವೃದ್ಧರು, ಯುವಕರು ಎಲ್ಲರ ಧ್ವನಿಯೂ ಒಂದೇ. ಅದು ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿಯ ಸರ್ಕಾರ ಎಂದು. ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಬಹುಮತದಿಂದ ಆಯ್ಕೆ ಮಾಡಲು ಜನರು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸಮಾಜವನ್ನು ಎತ್ತಿಕಟ್ಟುವುದರಲ್ಲಿ ನಿರತವಾಗಿದೆ. ಹಲವು ವರ್ಷ ದೇಶದಲ್ಲಿ ಆಡಳಿತ ನಡೆಸಿದರು ಕಾಂಗ್ರೆಸ್ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡಲಿಲ್ಲ. ಬಡಜನರು ಕತ್ತಲಲ್ಲೇ ಕಾಲ ಕಳೆಯುವಂತೆ ಮಾಡಿತ್ತು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ʼಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼ ಘೋಷ ವಾಕ್ಯದಡಿ ಎಲ್ಲರ ಅಭಿವೃದ್ಧಿ ಆರಂಭಿಸಿದೆವು ಎಂದರು.
2009ರಲ್ಲಿ ಕಾಂಗ್ರೆಸ್ ದೇಶದ ಜನರಿಗೆ ಸುಳ್ಳು ಗ್ಯಾರಂಟಿ ನೀಡಿದ್ದರು. ಈಗಲೂ ಮತ್ತದೇ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್, ಜೆಡಿಎಸ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.