ಕಳೆದ ನಾಲ್ಕು ವರ್ಷಗಳಿಂದ ದುಬೈನಲ್ಲಿ ತನ್ನ ನಾಯಿಗಳೊಂದಿಗೆ ಹೋಂಡಾ ಸಿಟಿಯಲ್ಲಿ ವಾಸಿಸುತ್ತಿದ್ದ ಪ್ರಿಯಾ ಎಂಬ ಭಾರತೀಯ ಮಹಿಳೆಯೊಬ್ಬರ ಕಥೆ ನಮಗೆ ತಿಳಿದಿದೆಯೇ?
ಪ್ರಿಯಾ ದುಬೈನಲ್ಲಿ ಸುಮಾರು 40 ವರ್ಷಗಳನ್ನು ಕಳೆದಿದ್ದಾರೆ. ಆಕೆಯ ಪೋಷಕರು ಕಂಪನಿಯನ್ನು ಹೊಂದಿದ್ದರು ಅಲ್ಲದೆ ಅವರು ಅದ್ಧೂರಿ ಜೀವನವನ್ನು ನಡೆಸಿದ್ರು. ಆದರೆ ಆಕೆಯ ತಂದೆ ಅನಿರೀಕ್ಷಿತವಾಗಿ ಒಂದು ದಿನ ನಿಧನರಾದರು.
ಅಂದಿನಿಂದ ಆಕೆಯ ತಾಯಿ ಅನಾರೋಗ್ಯಕ್ಕೆ ಒಳಗಾದರು. ಇದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಿದ್ರು. ಕಂಪನಿಯನ್ನು ಸರಿಯಾಗಿ ನಿರ್ವಹಿಸಲಾರದೆ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಸಂಭವಿಸಿತು. ಇದರಿಂದ ಪರಿಸ್ಥಿತಿಯು ಹದಗೆಟ್ಟಿತು. ಕೆಲ ವರ್ಷಗಳ ಹಿಂದೆ ಪ್ರಿಯಾ ಅವರ ತಾಯಿಯೂ ನಿಧನರಾಗಿದ್ದು, ಪ್ರಿಯಾಗೆ ನುಂಗಲಾರದ ತುತ್ತಾಯಿತು.
ಪ್ರಿಯಾ ತನ್ನ ತಾಯಿಯ ನೆನಪಿಗಾಗಿ ಹೋಂಡಾ ಸಿಟಿ ಕಾರನ್ನು ಇಟ್ಟುಕೊಂಡಿದ್ದರು. ಆಕೆಯ ತಾಯಿ ತನ್ನ ಕೊನೆಯ ಕೆಲವು ದಿನಗಳನ್ನು ಅದೇ ವಾಹನದಲ್ಲಿ ಕಳೆದರು ಎಂದು ಹೇಳಲಾಗಿದೆ. ಈ ಮಧ್ಯೆ, ಅವರ ವೀಸಾ ಅವಧಿ ಮುಗಿದಿದ್ದು, ಕಾನೂನು ನಿರ್ಬಂಧಗಳಿಂದಾಗಿ, ಪ್ರಿಯಾ ದೇಶವನ್ನು ತೊರೆಯಲು ಸಾಧ್ಯವಾಗಲಿಲ್ಲ. ನಾಲ್ಕು ವರ್ಷಗಳಿಂದ ದುಬೈನಲ್ಲಿ ಅಕ್ರಮವಾಗಿ ನೆಲೆಸಿದ್ದಕ್ಕಾಗಿ ಸಾಲ ಮತ್ತು ದಂಡದ ಮೊತ್ತ 26 ಲಕ್ಷ ರೂ. ಕಟ್ಟಬೇಕಿದೆ. ಈ ಪರಿಸ್ಥಿತಿಗಳ ನಡುವೆ, ಅವರು ನಾಲ್ಕು ವರ್ಷಗಳಿಂದ ಕಾರಿನಲ್ಲಿ ವಾಸಿಸುತ್ತಿದ್ದರು. ಸಹಾಯಕ್ಕಾಗಿ ಕಾಯುತ್ತಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಪ್ರಿಯಾಳ ವಿಡಿಯೋವನ್ನು ನೋಡಿದ ನಂತರ, ದುಬೈನಲ್ಲಿ ಕಾರ್ ಫೇರ್ ಗ್ರೂಪ್‌ನ ಎಂಡಿಯಾಗಿ ಸೇವೆ ಸಲ್ಲಿಸುತ್ತಿರುವ ಪಂಜಾಬ್‌ನ ಉದ್ಯಮಿ ಜಸ್ಬೀರ್ ಬಸ್ಸಿ, ಅಲ್ಲಿ ಕೆಲಸ ಮಾಡುವ ಬಿಜು ಮೂಲಕ ಪ್ರಿಯಾ ಅವರ ಸಂಕಷ್ಟದ ಬಗ್ಗೆ ತಿಳಿದುಕೊಂಡರು. ಪ್ರಿಯಾ ಪರಿಸ್ಥಿತಿಯ ಬಗ್ಗೆ ಹೆಚ್ಚು ತಿಳಿದುಕೊಂಡ ನಂತರ ಜಸ್ಬೀರ್ ಬಸ್ಸಿ ಅವರು ತಮ್ಮ ಕಚೇರಿಗೆ ಆಹ್ವಾನಿಸಿದರು. ಅಲ್ಲಿ ಪ್ರಿಯಾ ಸಾಲದ ಸಂಪೂರ್ಣ ಮೊತ್ತದ ಚೆಕ್ ಕೊಟ್ಟರು. ನಂತರ ಪ್ರಿಯಾ ಜಸ್ಬೀರ್ ಅವರ ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.
ಜಸ್ಬೀರ್ ಪ್ರಿಯಾಗೆ ಹಣಕಾಸಿನ ನೆರವು ಮಾತ್ರವಲ್ಲದೆ ಅವರ ಕಂಪನಿಯಲ್ಲಿ ಸ್ಥಾನವನ್ನೂ ನೀಡುವುದಾಗಿ ಭರವಸೆ ನೀಡಿದರು. ಪ್ರಿಯಾ ಮೂರು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಆಕೆಗೆ ಕಾರ್ ಫೇರ್‌ನಿಂದ ಕಾರನ್ನು ಸಹ ನೀಡಲಾಯಿತು. ಆದರೆ ಅದನ್ನು ಆಕೆ ತಿರಸ್ಕರಿಸಿದರು.