ಸರ್ಕಾರಿ ನೌಕರರಿಗೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವೇತನ ದೊರೆಯದೇ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅನೇಕ ನೌಕರರು ಚುನಾವಣೆ ಕರ್ತವ್ಯದಲ್ಲಿ ಕಾರ್ಯಯೋನ್ಮುಖರಾಗಿದ್ದಾರೆ.
ಖಜಾನೆ 2 ತಂತ್ರಾಂಶದ ನೆಪದಿಂದಾಗಿ ಎರಡು ತಿಂಗಳಿನಿಂದ ವಿವಿಧ ಇಲಾಖೆಯ ನೌಕರರಿಗೆ ವೇತನ ನೀಡಿಲ್ಲ. ಹಣಕಾಸು ಇಲಾಖೆ ತಂತ್ರಾಂಶದ ನೆಪ ನೀಡಿ ವೇತನ ಕೊಡಲು ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ದೂರು ಕೇಳಿ ಬಂದಿವೆ.
ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜು ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗೆ ಶಿಕ್ಷಣ, ಆರೋಗ್ಯ ಇಲಾಖೆ, ರೇಷ್ಮೆ ಇಲಾಖೆ, ಕೃಷಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 4.5 ಲಕ್ಷ ಸರ್ಕಾರಿ ನೌಕರರಿಗೆ ವೇತನವಿಲ್ಲದೆ ತೊಂದರೆ ಎದುರಾಗಿದೆ ಎಂದು ಹೇಳಲಾಗಿದೆ.
ನೌಕರರಿಗೆ ಶೇಕಡ 17ರಷ್ಟು ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು ಏಪ್ರಿಲ್ ನಿಂದ ಅನ್ವಯವಾಗಬೇಕಿದೆ. ಬಜೆಟ್ ಪ್ರಕ್ರಿಯೆ ಮುಗಿಸಿ ಎರಡು ತಿಂಗಳಾದರೂ ಸಮಸ್ಯೆ ಇತ್ಯರ್ಥಗೊಂಡಿಲ್ಲ. ನೌಕರರ ಸಂಘಟನೆಗಳ ಅಧ್ಯಕ್ಷರು ಹಣಕಾಸು ಇಲಾಖೆ ಅಧಿಕಾರಿಗಳ ಭೇಟಿ ಮಾಡಿ ವೇತನ ಪಾವತಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ವಿವಿಧ ಇಲಾಖೆಗಳ ನೌಕರರಿಗೆ ವೇತನವಿಲ್ಲದೆ ತೊಂದರೆ ಎದುರಾಗಿದೆ ಎನ್ನಲಾಗಿದೆ.