
ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಆಗಿದ್ದ ಖಾತೆಯೊಂದನ್ನು ಸಕ್ರಿಯಗೊಳಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ 90,000 ರೂ. ಪಂಗನಾಮ ಇಟ್ಟ ದೆಹಲಿಯ 20 ವರ್ಷದ ಸೈಬರ್ ಚೋರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಜಾಮಿಯಾ ನಗರದ ನಿವಾಸಿ ಜುನೇದ್ ಬೇಗ್ ಹೆಸರಿನ ಈತ ಸಂತ್ರಸ್ತೆಯ ವಾಟ್ಸಾಪ್ ಖಾತೆಗೆ ಹುಸಿ ಸಂದೇಶವೊಂದನ್ನು ಕಳುಹಿಸಿ, ಅವಾಚ್ಯ ಭಾಷೆ ಬಳಕೆಯ ಕಾರಣ ತಮ್ಮ ಖಾತೆ ಬ್ಲಾಕ್ ಆಗಿದ್ದು, ದುಡ್ಡು ಕೊಟ್ಟಲ್ಲಿ ಅದನ್ನು ಅನ್‌ಬ್ಲಾಕ್ ಮಾಡುವುದಾಗಿ ಹೇಳಿದ್ದಾನೆ. ಎಂಟು ಲಕ್ಷ ಅನುಯಾಯಿಗಳನ್ನು ಹೊಂದಿದ್ದ ಮಹಿಳೆ ತಕ್ಷಣ ಆಪಾದಿತನ ಈ ಡಿಮ್ಯಾಂಡ್‌ಗೆ ಬಾಗಿದ್ದಾರೆ.
ಮೊದಲಿಗೆ ತನ್ನ ಖಾತೆಗೆ 10,000 ರೂ.ಗಳನ್ನು ಹಾಕಿಸಿಕೊಂಡ ಆಪಾದಿತ, ನಂತರ ಇನ್ನಷ್ಟು ದುಡ್ಡಿಗೆ ಆಗ್ರಹಿಸಿ ಇನ್ನೂ 80,000 ರೂ.ಗಳನ್ನು ಹಾಕಿಸಿಕೊಂಡಿದ್ದಾನೆ.
ಸಂತ್ರಸ್ತ ಮಹಿಳೆ ಕೊಟ್ಟ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಪೊಲೀಸರು, ಆಪಾದಿತನ ಮೊಬೈಲ್ ನಂಬರ್ ಟ್ರ‍್ಯಾಕಿಂಗ್ ಮಾಡಿ ಆತನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ದೊಡ್ಡ ಸಂಖ್ಯೆಯಲ್ಲಿ ಅನುಯಾಯಿಗಳಿರುವ ಖಾತೆಗಳನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸುತ್ತಿದ್ದ ಆಪಾದಿತ, ಈ ಖಾತೆಗಳನ್ನು ರಿಪೋರ್ಟ್ ಮಾಡಿ, ನಂತರ ಸಂತ್ರಸ್ತರಿಗೆ ಸಂದೇಶ ಕಳುಹಿಸಿ ತನಗೆ ಇಂತಿಷ್ಟು ದುಡ್ಡು ಕೊಟ್ಟರೆ ಅನ್‌ಬ್ಲಾಕ್ ಮಾಡುವುದಾಗಿ ಹೇಳಿಕೊಂಡು ವಂಚನೆಯೆಸಗುತ್ತಾ ಬಂದಿದ್ದಾನೆ.