ದುಬೈ: ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗಷ್ಟೇ ದುಬೈನಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ಕ್ರಿಸನ್ ಪೆರೇರಾ ಇದೀಗ ಬಿಡುಗಡೆಯಾಗಿದ್ದಾರೆ. ವರದಿಗಳ ಪ್ರಕಾರ, ಕ್ರಿಸನ್ ಬಿಡುಗಡೆಯಾದ ತಕ್ಷಣ ಆಕೆಯ ಸಹೋದರ ಕೆವಿನ್ ಪೆರೇರಾ ಅವರೊಂದಿಗೆ ಮೊದಲು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಕ್ರಿಸನ್ ಪೆರೇರಾ ಅವರನ್ನು ಏಪ್ರಿಲ್ 1 ರಂದು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ನಾಯಿಯೊಂದರ ಜಗಳದ ನಂತರ ಸೇಡು ತೀರಿಸಿಕೊಳ್ಳಲು ಬೇಕರಿ ಮಾಲೀಕನೊಬ್ಬ ನಟಿಯನ್ನು ಡ್ರಗ್ಸ್ ಕೇಸ್ನಲ್ಲಿ ಸಿಲುಕಿಸಿದ್ದಾರೆ ಎಂದು ಮುಂಬೈ ಕ್ರೈಂ ಬ್ರಾಂಚ್ ತಿಳಿಸಿದೆ.
ಆಂಟನಿ ಕ್ರಿಸನ್ ಪೆರೇರಾ ಅವರನ್ನು ಬಲೆಗೆ ಬೀಳಿಸಲು ಸಹಾಯ ಮಾಡಿದ ಬೇಕರಿ ಮಾಲೀಕ ಅಂಥೋನಿ ಪಾಲ್ ಮತ್ತು ಬ್ಯಾಂಕ್ ಸಹಾಯಕ ಜನರಲ್ ಮ್ಯಾನೇಜರ್ ರಾಜೇಶ್ ಬೋಭಾಟೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನಾಯಿಯ ವಿಚಾರವಾಗಿ ಆಂಟನಿ ಸಹೋದರಿ, ನಟಿಯ ತಾಯಿಯೊಂದಿಗೆ ಜಗಳವಾಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಬ್ಬರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಇದೇ ವಿಚಾರವಾಗಿ ನಟಿಯನ್ನು ಡ್ರಗ್ಸ್ ಕೇಸ್ನಲ್ಲಿ ಸಿಲುಕಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.