ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಭರಪೂರ ಭರವಸೆ ನೀಡಲಾಗಿದೆ. ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಮಹಿಳೆಯರು, ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರು, ಆಟೋ ಚಾಲಕರು ಸೇರಿ ಎಲ್ಲಾ ಸಮುದಾಯಕ್ಕೂ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗಿದೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತೋಶ್ರೀ ಯೋಜನೆ ಜಾರಿಗೊಳಿಸಲಿದ್ದು, ಗರ್ಭಿಣಿಯರಿಗೆ ಆರು ತಿಂಗಳು 6,000 ರೂ. ಭತ್ಯೆ ನೀಡಲಾಗುವುದು. ವಿಧವಾ ವೇತನ 900 ರೂ.ನಿಂದ 2500ರೂ.ಗೆ ಹೆಚ್ಚಳ ಮಾಡಲಾಗುವುದು. ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಕಾಯಂ, ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ಯೋಜನೆ, ಕೃಷಿಕರಿಗಾಗಿ ರೈತ ಬಂಧು ಯೋಜನೆ ಘೋಷಣೆ ಮಾಡಲಾಗಿದೆ.
ಇದರೊಂದಿಗೆ ಕೃಷಿ ಕಾರ್ಮಿಕರಿಗೆ 2,000 ರೂ. ಸಹಾಯಧನ, ಬಿತ್ತನೆ ಬೀಜ, ಗೊಬ್ಬರ ಖರೀದಿಗೆ 10,000 ರೂ., ರೈತ ಯುವಕರನ್ನು ಮದುವೆಯಾಗುವವರಿಗೆ ಎರಡು ಲಕ್ಷ ರೂಪಾಯಿ, ಆಟೋ ಚಾಲಕರಿಗಾಗಿ ಸಾರಥಿ ಸೈಯೋಜನೆ ಜಾರಿ, ಆಟೋ ಚಾಲಕರಿಗೆ 2000 ರೂ., ಹಿರಿಯ ನಾಗರಿಕರಿಗಾಗಿ ಮಾಸಾಶನ 5000 ರೂ.ಗೆ ಹೆಚ್ಚಳ ಮಾಡಲಾಗುವುದು. ವರ್ಷಕ್ಕೆ 5 ಅಡುಗೆ ಅನಿಲ ಸಿಲಿಂಡರ್ ಉಚಿತ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸೈಕಲ್, ಸರ್ಕಾರಿ ಕಾಲೇಜ್ ವಿದ್ಯಾರ್ಥಿನಿಯರಿಗೆ ಸ್ಕೂಟರ್ ನೀಡಲಾಗುವುದು.