ರಾಷ್ಟ್ರ ರಾಜಧಾನಿ ದೆಹಲಿಯ ಎರೋಸಿಟಿ ಪ್ರದೇಶದಲ್ಲಿರುವ ಜೆ ಡಬ್ಲ್ಯೂ ಮ್ಯಾರಿಯಟ್ ಹೊಟೇಲಿನ ಸಿಬ್ಬಂದಿ ತನ್ನನ್ನು ಗಂಟೆಗಳ ಕಾಲ ಸೆರೆಯಲ್ಲಿಟ್ಟು, ಕಿರುಕುಳ ನೀಡಿದ್ದಾರೆ ಎಂದು 55 ವರ್ಷದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ಕಂಪನಿ ಮ್ಯಾರಿಯಟ್ ಹೊಟೇಲ್‌ನಲ್ಲಿ ಸಮಾರಂಭವೊಂದನ್ನು ಆಯೋಜಿಸಿದ್ದ ಸಂದರ್ಭದಲ್ಲಿ ಬಿಲ್ ಒಂದರ ಪಾವತಿ ಸಂದರ್ಭದಲ್ಲಿ ಉಂಟಾದ ಭಿನ್ನಭಿಪ್ರಾಯದ ಹಿನ್ನೆಲೆಯಲ್ಲಿ ಹೊಟೆಲ್ ಸಿಬ್ಬಂದಿ ತಮ್ಮ ಬಗ್ಗೆ ಕೀಳಾಗಿ ಮಾತನಾಡಿದರು ಎಂದು ಮಹಿಳೆಯರ ಬ್ಯುಸಿನೆಸ್ ಸಂಸ್ಥೆಯೊಂದರ ಕಾನೂನು ಸಲಹೆಗಾರ್ತಿಯಾಗಿ ಕೆಲಸ ಮಾಡುವ ಈಕೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
“ನನ್ನ ಮೇಲೆ ಕಣ್ಣಿಡಲು ಇಬ್ಬರು ಪುರುಷ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ನಾನು ಶೌಚಾಲಯಕ್ಕೆ ಹೋದಾಗಲೂ ಅವರು ನನ್ನ ಮೇಲೆ ಕಣ್ಣಿಟ್ಟಿದ್ದರು. ಹೊಟೇಲಿನ ಶೆಫ್ ಒಬ್ಬರು ನನ್ನನ್ನು ಒಪ್ಪಲಾರದ ರೀತಿಯಲ್ಲಿ ಮುಟ್ಟಿದ್ದಾರೆ. ಅವರ ಹೆಸರು ಗೊತ್ತಿಲ್ಲ, ಆದರೆ ಎದುರಿಗೆ ಬಂದಾಗ ಗುರುತಿಸಬಲ್ಲೆ,” ಎಂದು ಸಹ ಈಕೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ವಿಮಾನ ನಿಲ್ದಾಣದ ಪೊಲೀಸ್ ಠಾಣೆ ಎಫ್‌ಐಆರ್ ದಾಖಲಿಸಿಕೊಂಡಿದೆ.
ಈ ಕುರಿತು ಮ್ಯಾರಿಯಟ್ ಹೊಟೇಲ್ ಆಡಳಿತ ಪ್ರಕಟಣೆ ಬಿಡುಗಡೆ ಮಾಡಿದ್ದು, “ಈ ಸಂಬಂಧ ಮಾಡಿರುವ ಎಲ್ಲಾ ಆಪಾದನೆಗಳನ್ನು ಜೆ ಡಬ್ಲ್ಯೂ ಮ್ಯಾರಿಯಟ್ ಹೊಟೇಲ್ ಬಲವಾಗಿ ಅಲ್ಲಗಳೆಯುತ್ತದೆ. ಪ್ರಕರಣದ ತನಿಖೆ ಸಂಬಂಧ ಅಧಿಕಾರಿಗಳಿಗೆ ನಾವು ಸಂಪೂರ್ಣವಾಗಿ ಸಹಕರಿಸುತ್ತೇವೆ,” ಎಂದು ತಿಳಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ತಮ್ಮ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೊಟೇಲ್ ನೀಡಿದ ಸೇವೆ ಹಾಗೂ ಆಹಾರದ ಗುಣಮಟ್ಟ ಕೆಟ್ಟದಾಗಿದೆ ಎಂದು ತಿಳಿಸಿದ ದೂರುದಾರೆ, ಬಿಲ್ ಪಾವತಿ ಮಾಡಲು ತಮ್ಮ ಕಂಪನಿ ಒಂದಷ್ಟು ಸಮಯ ತೆಗೆದುಕೊಂಡಿದ್ದು, ಆ ವೇಳೆಗಾಗಲೇ 80%ನಷ್ಟು ಬಿಲ್ ಪಾವತಿ ಮಾಡಿಯಾಗಿತ್ತು ಎಂದಿದ್ದಾರೆ.
“ನಾವು ಜನವರಿ 1ರವರೆಗೂ 30 ಕೋಣೆಗಳನ್ನು ಬುಕ್ ಮಾಡಿದ್ದೆವು. ಮಿಕ್ಕ ಪಾವತಿಯನ್ನು ಜನವರಿ 1ರ ವೇಳೆಗೆ ಮಾಡಲು ಅವಕಾಶ ಕೋರಿದೆವು. ಆದರೆ ನನ್ನನ್ನು ಹಾಗೂ ಇತರ ಆಯೋಜಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ಹೊಟೇಲ್‌ನಿಂದ ಆಚೆ ಬರಲು ಬಿಡಲಿಲ್ಲ,” ಎಂದು ಈಕೆ ತಿಳಿಸಿದ್ದಾರೆ.
“ಮಧ್ಯ ರಾತ್ರಿ 12:10ರ ವೇಳಗೆ 1091 ಸಹಾಯವಾಣಿಗೆ ಕರೆ ಮಾಡಿದ ಬಳಿಕ, ಠಾಣೆಯಿಂದ ಕೂಡಲೇ ಸಬ್-ಇನ್ಸ್‌ಪೆಕ್ಟರ್ ಒಬ್ಬರು ಬಂದ ಮೇಲೆ ನನಗೆ ಮನೆಗೆ ಹೋಗಲು ಬಿಟ್ಟರು. ನನ್ನನ್ನು ಅನಧಿಕೃತವಾಗಿ ಹಲವಾರು ಗಂಟೆಗಳ ಕಾಲ ಇರಿಸಿಕೊಂಡ ಹೊಟೇಲ್ ಸಿಬ್ಬಂದಿ ಈ ವೇಳೆ ಬಹಳ ಕಿರುಕುಳ ನೀಡಿದರು,” ಎಂದು ಈಕೆ ಹೇಳಿಕೊಂಡಿದ್ದಾರೆ.