ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದೆ. ಅದಕ್ಕಿಂತ ಮೊದಲೇ ಏಪ್ರಿಲ್ 29ರಿಂದ ಮೇ 6ರವರೆಗೆ 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಲಿದ್ದಾರೆ.
ಇದೇ ಮೊದಲ ಬಾರಿಗೆ ವಿಕಲಚೇತನರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಗೌಪ್ಯವಾಗಿ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. 99,529 ಮತದಾರರು ಮನೆಯಿಂದಲೇ ಮತದಾನ ಮಾಡಲು ನೊಂದಾಯಿಸಿಕೊಂಡಿದ್ದಾರೆ.
ಚುನಾವಣಾ ಸಿಬ್ಬಂದಿ ನೋಂದಾಯಿತ ವ್ಯಕ್ತಿಗಳ ಮನೆಗೆ ಬರುವ ಸಮಯವನ್ನು ಮೊದಲೇ ತಿಳಿಸುತ್ತಾರೆ. ಮಾಹಿತಿ ನೀಡಿದ ನಂತರ ಮೊದಲ ಬಾರಿಗೆ ಮನೆಯಲ್ಲಿ ಇಲ್ಲದಿದ್ದರೆ ಎರಡನೇ ಬಾರಿಗೆ ಮತದಾನ ಮಾಡಲು ಅವಕಾಶ ನೀಡಲಾಗುವುದು. ಎರಡನೇ ಬಾರಿ ಮನೆಯಲ್ಲಿ ಇಲ್ಲದಿದ್ದರೆ ಮೂರನೇ ಸಲ ಅವಕಾಶ ಇರುವುದಿಲ್ಲ. ಮತ ಕೇಂದ್ರಗಳಿಗೂ ಬಂದು ಮತದಾನ ಮಾಡಲು ಅವಕಾಶ ಇರುವುದಿಲ್ಲ. ಮನೆಯಲ್ಲಿ ಗೌಪ್ಯವಾಗಿ ಮತದಾನ ಮಾಡಬಹುದು ಎಂದು ಹೇಳಲಾಗಿದೆ.