ಬಾಗಲಕೋಟೆ: ಲಿಂಗಾಯಿತ ಸಿಎಂ ಭ್ರಷ್ಟರು, ರಾಜ್ಯವನ್ನು ಹಾಳು ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀದಿರುವ ಸಿದ್ದರಾಮಯ್ಯ, ವಿವಾದವಾಗುವಂತಹ ಹೇಳಿಕೆಯನ್ನು ನಾನು ಕೊಟ್ಟಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಾಧ್ಯಮದವರು ಲಿಂಗಾಯಿತ ಸಿಎಂ ಬಗ್ಗೆ ಕೇಳಿದ್ದರು. ಪ್ರತಿಕ್ರಿಯಿಸುವಾಗ ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ ಎಂದು ಹೇಳಿದ್ದೆ, ನಾನು ಬಸವರಾಜ ಬೊಮ್ಮಾಯಿ ಅವರಿಗೆ ಸೀಮಿತವಾಗಿ ಭ್ರಷ್ಟ ಎಂದು ಹೇಳಿದ್ದೆ, ಲಿಂಗಾಯತರು ಭ್ತಷ್ಟರು ಎಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಲಿಂಗಾಯತರಲ್ಲಿ ಬಹಳಷ್ಟು ಮಂದಿ ಮುಖ್ಯಮಂತ್ರಿಗಳು ಅತ್ಯಂತ ಪ್ರಾಮಾಣಿಕರಿದ್ದರು. ವೀರೇಂದ್ರ ಪಾಟೀಲರು, ನಿಜಲಿಂಗಪ್ಪನವರು, ಜೆ.ಹೆಚ್ ಪಟೇಲರು ಇವರೆಲ್ಲ ಪ್ರಾಮಾಣಿಕರಾಗಿದ್ದರು ಆದರೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟರಿದ್ದಾರೆ ಎಂದು ಹೇಳಿದ್ದೆ. ಅದನ್ನು ತಿರುಚಿ ಲಿಂಗಾಯಿತರು ಭ್ರಷ್ಟರು ಎಂದು ಹೇಳಿದ್ದೇನೆ ಎಂಬ ರೀತಿ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಲಿಂಗಾಯಿತರ ಮೇಲೆ ನನಗೆ ಅಪಾರ ಗೌರವವಿದೆ. ನಾನು ಆ ಸಮುದಾಯದ ವಿರುದ್ಧವಿಲ್ಲ. ಅನಗತ್ಯವಾಗಿ ಗೊಂದಲ ಉಂಟುಮಾಡಲು ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.