ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯ ಯುವ ಕಾರ್ಮಿಕರೊಬ್ಬರಿಗೆ ಕಳೆದ 136 ವರ್ಷಗಳಿಂದ ಭೂಮಿಯೊಳಗೆ ಬಚ್ಚಿಡಲಾಗಿದ್ದ 240 ಬೆಳ್ಳಿ ನಾಣ್ಯಗಳು ಸಿಕ್ಕಿವೆ. ಈ ನಾಣ್ಯಗಳನ್ನು ತನ್ನ ಮನೆಗೊಯ್ದ ಈತ, ರಾತ್ರಿಯೆಲ್ಲಾ ನಿದ್ರೆ ಬಾರದೇ ಇದ್ದ ಕಾರಣ, ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅವುಗಳನ್ನು ಒಪ್ಪಿಸಿದ್ದಾರೆ.
ಹಲ್ಲೇ ಅಹಿರ್ವಾರ್ ಹೆಸರಿನ ಈ ದಿನಗೂಲಿ ಕಾರ್ಮಿಕನ ಪ್ರಾಮಾಣಿಕತೆಯನ್ನು ಪೊಲೀಸರು ಮೆಚ್ಚಿಕೊಂಡಿದ್ದಾರೆ. 1887ರಲ್ಲಿ ಟಂಕಿಸಲಾದ ಈ ನಾಣ್ಯಗಳು ರಾಜರ ಕಾಲದವಾಗಿದ್ದು, ಅವುಗಳ ಬೆಲೆಯನ್ನು ತಿಳಿಯಲು ಯತ್ನಿಸಿದ್ದಾರೆ ಪೊಲೀಸರು.
ಮನೆಯೊಂದರ ತಳಪಾಯಕ್ಕೆಂದು ಗುಂಡಿಗಳನ್ನು ತೋಡುತ್ತಿದ್ದ ವೇಳೆ ಅಹಿರ್ವಾರ್ಗೆ ಈ ನಾಣ್ಯಗಳ ಗಂಟು ಸಿಕ್ಕಿದೆ. ಕೇವಲ ಬೆಳ್ಳಿಯ ತೂಕದ ಮೇಲೆ ಹೋದರೂ ಈ ನಾಣ್ಯಗಳು 1.92 ಲಕ್ಷ ರೂ.ಗಳಷ್ಟು ಬೆಲೆ ಬಾಳುತ್ತವೆ.
ಮನೆಯ ತಳಪಾಯದ ಕೆಲಸವನ್ನು ಸದ್ಯದ ಮಟ್ಟಿಗೆ ನಿಲ್ಲಿಸಲಾಗಿದ್ದು, ಪ್ರಾಚ್ಯ ವಸ್ತು ಹಾಗೂ ಖನಿಜಗಳ ಇಲಾಖೆಗಳಿಗೆ ವಿಚಾರ ಮುಟ್ಟಿಸಿರುವ ಪೊಲೀಸರು ಸ್ಥಳದ ಮಹಜರು ಮಾಡಿಕೊಂಡಿದ್ದಾರೆ.