ಬಿಹಾರ ಸರನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಕೆಲಸ ಮಾಡುವ ಎಲ್ಲಾ ಸರ್ಕಾರಿ ನೌಕರರಿಗೆ ಕಚೇರಿಯಲ್ಲಿ ಜೀನ್ಸ್ ಹಾಗು ಟೀ-ಶರ್ಟ್ ಧರಿಸುವುದನ್ನು ನಿಷೇಧಿಸಲಾಗಿದೆ.
ಕಚೇರಿಯಲ್ಲಿರುವ ವೇಳೆ ಕುತ್ತಿಗೆಗೆ ಐಡೆಂಟಿಟಿ ಕಾರ್ಡ್‌ಗಳನ್ನು ಧರಿಸಲು ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಕಚೇರಿಯಲ್ಲಿ ಕೆಲಸದ ಅವಧಿಯಲ್ಲಿ ಫಾರ್ಮಲ್ ಉಡುಗೆಗಳಲ್ಲಿ ಇರುವಂತೆ ಸಹ ಉದ್ಯೋಗಿಗಳಿಗೆ ತಿಳಿಸಲಾಗಿದೆ.
ತನ್ನ ಈ ನಿರ್ದೇಶನಗಳನ್ನು ಅದ್ಯಾವ ಮಟ್ಟಿಗೆ ಪಾಲಿಸಲಾಗುತ್ತಿದೆ ಎಂದು ಗಮನಿಸಲು ವಿವಿಧ ಇಲಾಖೆಗಳಿಗೆ ಅಧಿಕಾರಿಗಳ ಅಚ್ಚರಿ ಭೇಟಿ ಹಾಗೂ ವಿಡಿಯೋ ಕಾನ್ಫರೆನ್ಸ್‌ಗಳನ್ನು ಮಾಡುವುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಈ ಹೊಸ ಮಾರ್ಗಸೂಚಿಗಳ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವುದಾಗಿ ಮ್ಯಾಜಿಸ್ಟ್ರೇಟ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಕಾರ್ಯದರ್ಶಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸರಳವಾದ, ಆರಾಮದಾಯಕವಾದ, ತೆಳು ಬಣ್ಣದ ಫಾರ್ಮಲ್ ಧಿರಿಸಿನಲ್ಲಿ ಬರುವಂತೆ ನಿತೀಶ್ ಕುಮಾರ್ ಸರ್ಕಾರ ಆದೇಶ ಹೊರಡಿಸಿತ್ತು.
ಕಳೆದ ವರ್ಷ ಸರ್ಕಾರೀ ಕಚೇರಿಗಳಲ್ಲಿ ಉದ್ಯೋಗಿಗಳು ಜೀನ್ಸ್ ಹಾಗೂ ಟೀ ಶರ್ಟ್ ಧರಿಸುವುದನ್ನು ನಿಷೇಧಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿತ್ತು.
2021ರಲ್ಲಿ, ಸಿಬಿಐ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಜೀನ್ಸ್ ಹಾಗೂ ಸ್ಪೋರ್ಟ್ಸ್ ಶೂಗಳನ್ನು ಧರಿಸದಂತೆ ಆಗಿನ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಆದೇಶ ಹೊರಡಿಸಿದ್ದರು.