ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಎಸ್.ಎನ್. ಚನ್ನಬಸಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಅವರು ಪುತ್ರ ಕೆ.ಇ. ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದರೂ ಫಲ ನೀಡಿಲ್ಲ. ಕೆ.ಎಸ್. ಈಶ್ವರಪ್ಪ, ಕೆ.ಇ. ಕಾಂತೇಶ್ ಇಲ್ಲವೇ ಈಶ್ವರಪ್ಪನವರ ಸೊಸೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಚನ್ನಬಸಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಕಳೆದ ಮೂರ್ನಾಲ್ಕು ದಶಕದಿಂದ ಬಿಜೆಪಿ ನಾಯಕರಾದ ಡಿ.ಹೆಚ್. ಶಂಕರಮೂರ್ತಿ, ಯಡಿಯೂರಪ್ಪ ಮತ್ತು ಈಶ್ವರಪ್ಪ ಒಟ್ಟಿಗೆ ರಾಜಕಾರಣ, ಪಕ್ಷ ಸಂಘಟನೆ, ಚುನಾವಣೆ ಮಾಡಿಕೊಂಡು ಬಂದಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಸ್ಪರ್ಧಿಸಿಲ್ಲ. ಸಭಾಪತಿಯಾಗಿದ್ದ ಶಂಕರಮೂರ್ತಿ ಪುತ್ರ ಡಿ.ಎಸ್. ಅರುಣ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರೂ ಪುತ್ರ ವಿಜಯೇಂದ್ರ ಅವರಿಗೆ ಶಿಕಾರಿಪುರ ಕ್ಷೇತ್ರದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮತ್ತೊಬ್ಬ ಪುತ್ರ ರಾಘವೇಂದ್ರ ಸಂಸದರಾಗಿದ್ದಾರೆ. ಆದರೆ ಪುತ್ರನಿಗೆ ಟಿಕೆಟ್ ಕೊಡಿಸಬೇಕೆಂಬ ಈಶ್ವರಪ್ಪ ಪ್ರಯತ್ನ ಕೈಗೂಡಿಲ್ಲ.