ಹೋಟೆಲ್ ನಲ್ಲಿ ಬಿರಿಯಾನಿ ತಿಂದ ಗ್ರಾಹಕರ ಬಳಿ ಬಿಲ್ ಪಾವತಿಸುವಂತೆ ಕೇಳಿದ್ದಕ್ಕೆ ವೇಟರ್ ಗೆ ನಾಲ್ವರು ಅಮಾನುಷವಾಗಿ ಥಳಿಸಿರೋ ಘಟನೆ ಮಧ್ಯಪ್ರದೇಶದ ಶಾಹದೋಲ್ ನಲ್ಲಿ ನಡೆದಿದೆ.
ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬುಧಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಝಾ ಹೈದರಾಬಾದಿ ಹೋಟೆಲ್‌ಗೆ ನಾಲ್ಕು ಮಂದಿ ಊಟಕ್ಕೆ ಬಂದಿದ್ದರು. ಬಿರಿಯಾನಿ ಆರ್ಡರ್ ಮಾಡಿ ತಿಂದಿದ್ದರು. ನಂತರ ಬಿಲ್ ಕೊಡುವಂತೆ ವೇಟರ್ ಪ್ರಕಾಶ್ ರಾಜ್ ಕೇಳಿದಾಗ ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ನಾವು ಹಣವನ್ನು ನೀಡುವುದಿಲ್ಲ ಬದಲಿಗೆ ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಅಂಕಿತ್, ಅನುರಾಗ್, ಬಾಬು ಮತ್ತು ಯಶ್ ಎಂದು ಗುರುತಿಸಲಾದ ಅವರು ಪ್ರಕಾಶ್ ರಾಜ್ ಅವರನ್ನು ಅವಾಚ್ಯವಾಗಿ ನಿಂದಿಸಿದರು. ಅಷ್ಟೇ ಅಲ್ಲದೇ ಕುರ್ಚಿಗಳು, ದೊಣ್ಣೆ ಸೇರಿದಂತೆ ಕೈಗೆ ಸಿಕ್ಕಿದ್ದನ್ನ ತೆಗೆದುಕೊಂಡು ವೇಟರ್ ಮೇಲೆ ಹಲ್ಲೆ ಮಾಡಿದರು. ಈ ಘಟನೆ ಹೋಟೆಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಂತ್ರಸ್ತ ಪ್ರಕಾಶ್ ರಾಜ್ ದೂರು ದಾಖಲಿಸಿದ ನಂತರ ಪೊಲೀಸರು ನಾಲ್ವರು ಆರೋಪಿಗಳನ್ನು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದಾರೆ.