ಮಾಫಿಯಾ ಡಾನ್ ಅತೀಕ್ ಅಹ್ಮದ್ ಹಂತಕರನ್ನು ಭಾರೀ ಭದ್ರತೆ ನಡುವೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಶೇಷ ತನಿಖಾ ತಂಡವು ಎಲ್ಲಾ ಮೂವರು ಶೂಟರ್ಗಳನ್ನು ಕಸ್ಟಡಿಗೆ ಕೋರಿ ಮನವಿ ಸಲ್ಲಿಸಿದೆ. ಮೂವರನ್ನು ವಿಚಾರಣೆಗಾಗಿ 14 ದಿನಗಳ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರಿದ್ದಾರೆ.
ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಎಂದು ಪೊಲೀಸರು ಗುರುತಿಸಿರುವ ಮೂವರನ್ನು ಪ್ರತಾಪಗಢ ಜೈಲಿನಿಂದ ಭಾರೀ ಭದ್ರತೆಯ ನಡುವೆ ನ್ಯಾಯಾಲಯಕ್ಕೆ ಕರೆತರಲಾಯಿತು. ಈ ಮೂವರನ್ನು ಸಶಸ್ತ್ರ ಪೊಲೀಸ್ ಸಿಬ್ಬಂದಿಗಳು ಭಾರೀ ಭದ್ರತೆಯೊಂದಿಗೆ ಕೋರ್ಟ್ ಗೆ ಕರೆತಂದ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಅರೆಸೈನಿಕ ಪಡೆಗಳು ಭದ್ರತೆಯಲ್ಲಿ ತೊಡಗಿದ್ದವು.
ಎಪ್ರಿಲ್ 15 ರಂದು ಪ್ರಯಾಗ್ರಾಜ್ನಲ್ಲಿ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇಬ್ಬರು ಸಹೋದರರ ಮೇಲೆ ಗುಂಡು ಹಾರಿಸುವ ಮೊದಲು ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಪತ್ರಕರ್ತರಂತೆ ಪೋಸ್ ನೀಡಿದ್ದರು.
ಅಹ್ಮದ್ ಮತ್ತು ಆತನ ಸಹೋದರನ ಹತ್ಯೆಗಳ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ. ಅರ್ಜಿಯ ವಿಚಾರಣೆ ಏಪ್ರಿಲ್ 24 ರಂದು ನಡೆಯಲಿದೆ.