ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ ಮನಸ್ತಾಪ ಮುಗಿಯುವಂತೆ ಕಾಣುತ್ತಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ ಸಿ ಬಿ ನಡುವಿನ ಪಂದ್ಯದ ವೇಳೆ ಇಬ್ಬರ ನಡುವಿನ ಜಿದ್ದಿನ ದೃಶ್ಯ ವೈರಲ್ ಆದ ಬೆನ್ನಲ್ಲೇ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಸೌರವ್ ಗಂಗೂಲಿಯನ್ನು ಅನ್ ಫಾಲೋ ಮಾಡಿದ್ದಾರೆ.
ಭಾರತದ ಮಾಜಿ ನಾಯಕ ಗಂಗೂಲಿ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ವಿರಾಟ್ ಕೊಹ್ಲಿ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಇತ್ತೀಚಿನ ಐಪಿಎಲ್ 2023 ಪಂದ್ಯದ ನಂತರ ಹಲವಾರು ದೃಶ್ಯಗಳು ವೈರಲ್ ಆಗಿದ್ವು. ಅದರಲ್ಲಿ ಪಂದ್ಯ ಮುಗಿದ ಬಳಿಕ ಸಾಂಪ್ರದಾಯಿಕವಾಗಿ ಹಸ್ತಲಾಘವ ಮಾಡುವ ವೇಳೆ ಸೌರವ್ ಗಂಗೂಲಿ, ಕೊಹ್ಲಿಗೆ ಶೇಕ್ ಹ್ಯಾಂಡ್ ಮಾಡದೇ ಮುಂದೆ ತೆರಳಿದರು.
ಮತ್ತೊಂದು ವಿಡಿಯೋದಲ್ಲಿ ಫೀಲ್ಡಿಂಗ್ ನಲ್ಲಿದ್ದ ಕೊಹ್ಲಿ, ಅಮನ್ ಹಕೀಮ್ ಖಾನ್ ರ ಕ್ಯಾಚ್ ಹಿಡಿದು ಸಂಭ್ರಮಿಸಿ, ಬೌಂಡರಿ ಗೆರೆ ಬಳಿ ಡೆಲ್ಲಿ ತಂಡದ ಮೆಂಟರ್ ಗಂಗೂಲಿಯನ್ನು ದಿಟ್ಟಿಸಿ ನೋಡುತ್ತಲಿದ್ದರು. ಈ ವಿಡಿಯೋ ವೈರಲ್ ಆಗಿ ಇಬ್ಬರ ನಡುವಿನ ಜಿದ್ದಿಗೆ ಕನ್ನಡಿ ಹಿಡಿದಿತ್ತು.
ಈ ಐಪಿಎಲ್ ಪಂದ್ಯದ ನಂತರ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಗಂಗೂಲಿಯನ್ನು ಅನ್‌ಫಾಲೋ ಮಾಡಿದ್ದಾರೆ. ಪಂದ್ಯಕ್ಕೂ ಮುನ್ನ ಕೊಹ್ಲಿ 276 ವ್ಯಕ್ತಿಗಳನ್ನು ಫಾಲೋ ಮಾಡ್ತಿದ್ರು. ಅದರಲ್ಲೀಗ ಗಂಗೂಲಿಯನ್ನು ಅನ್ ಫಾಲೋ ಮಾಡಿದ್ದಾರೆ.
ಗಂಗೂಲಿ ಮತ್ತು ಕೊಹ್ಲಿ ನಡುವಿನ ಜಿದ್ದು 2022 ರಿಂದ ಇದೆ. 2022ರ ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಕೆಳಗಿಳಿಸಿದ ದಿನದಿಂದ ಈ ಇಬ್ಬರ ನಡುವೆ ಮನಸ್ತಾಪ ಆರಂಭವಾಗಿದೆ ಎನ್ನಲಾಗುತ್ತಿದೆ.