ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅವರ ವಿರುದ್ಧ ಹೊಸ ನಾಯಕತ್ವ ಬೆಳೆಸಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೇ ಹುಬ್ಬಳ್ಳಿಗೆ ಕಳುಹಿಸುತ್ತಿದೆ.
ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು ಖುದ್ದಾಗಿ ರಾಷ್ಟ್ರೀಯ ಅಧ್ಯಕ್ಷರನ್ನೇ ಕಾರ್ಯತಂತ್ರ ರೂಪಿಸಲು ಕಳುಹಿಸಿದ್ದಾರೆ.
ನಾಳೆ ಸಂಜೆ ಹುಬ್ಬಳ್ಳಿಗೆ ಆಗಮಿಸಲಿರುವ ಜೆ.ಪಿ. ನಡ್ಡಾ ಹುಬ್ಬಳ್ಳಿಯ ಬಿಯುಬಿ ಕಾಲೇಜಿನಲ್ಲಿ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಧಾರವಾಡ ವಿಭಾಗದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಸಲಿದ್ದು, 800 ಪ್ರಮುಖರಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ಚುನಾವಣೆ ಸಿದ್ಧತೆ, ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಸಂಘಟನೆ, ಕಾರ್ಯಕರ್ತರಲ್ಲಿ ಗೊಂದಲವಾಗದಂತೆ ಚುನಾವಣೆಯನ್ನು ಎದುರಿಸುವ ಕಾರ್ಯತಂತ್ರ ಮೊದಲಾದ ವಿಷಯಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ.
ಇದುವರೆಗೂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಮೊದಲ ಬಾರಿಗೆ ಬಿಜೆಪಿಗೆ ಅವರು ಎದುರಾಳಿಯಾಗಿರುವ ಹಿನ್ನೆಲೆಯಲ್ಲಿ ಹೊಸ ತಂತ್ರಗಾರಿಕೆ ಅಳವಡಿಸಿಕೊಂಡು ಚುನಾವಣೆ ಸಿದ್ಧತೆ ನಡೆಸಲು ಜೆ.ಪಿ. ನಡ್ಡಾ ಕಾರ್ಯತಂತ್ರ ರೂಪಿಸಲಿದ್ದಾರೆ.
ಬುಧವಾರ ಬೆಳಗ್ಗೆ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಲಿರುವ ಅವರು ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿರುವರು.