ದುರಂತ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಇಂದೋರ್ ನ ಜುನಾ ರಿಸಾಲಾ ಪ್ರದೇಶದಲ್ಲಿ ಎರಡು ವರ್ಷದ ಗಂಡು ಮಗುವೊಂದು ನೆಲದೊಳಗಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದೆ. ಮಗುವಿನ ತಾಯಿ ಅವನಿಗೆ ಐಸ್ ಕ್ರೀಮ್ ಖರೀದಿಸಲು ಹೋಗಿದ್ದಾಗ ದುರಂತ ಸಂಭವಿಸಿದೆ.
ಮೃತ ಮಗುವನ್ನು ಜುನಾ ರಿಸಾಲ ನಿವಾಸಿ ಚಂದ್ರಶೇಖರ್ ಅವರ ಪುತ್ರ ಲಕ್ಷ್ಯ (2) ಎಂದು ಗುರುತಿಸಲಾಗಿದೆ. ಲಕ್ಷ್ಯ ಅವರ ತಾಯಿ ಕಾಲೋನಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿಂದ ಮನೆಗೆ ಹಿಂದಿರುಗಿ ಮಗುವನ್ನು ನೀರಿನ ಟ್ಯಾಂಕ್ ಬಳಿ ಕೂರಿಸಿ ಅವನಿಗೆ ಐಸ್ ಕ್ರೀಮ್ ಖರೀದಿಸಲು ಹೋಗಿದ್ದರು.
ವಾಪಸ್ ಬಂದು ನೋಡಿದಾಗ ಮಗು ಸ್ಥಳದಲ್ಲಿರಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಸಿಗಲಿಲ್ಲ. ಮಗು ತಾನಾಗಿಯೇ ಮನೆ ತಲುಪಿರಬಹುದು ಎಂದುಕೊಂಡು ಮನೆಗೆ ಬಂದು ನೋಡಿದರೂ ಮಗು ಅಲ್ಲಿರಲಿಲ್ಲ. ಗಾಬರಿಗೊಂಡ ತಾಯಿ ಲಕ್ಷ್ಯನನ್ನು ಕೂರಿಸಿದ ಸ್ಥಳಕ್ಕೆ ಬಂದು ನೋಡಿದಾಗ, ಮಗು ನೀರಿನ ತೊಟ್ಟಿಯಲ್ಲಿ ಮುಳುಗಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗು ಉಳಿಯಲಿಲ್ಲ.
ನೀರಿನ ತೊಟ್ಟಿಯ ಮೇಲಿನ ಸ್ಲ್ಯಾಬ್ ಮೇಲೆ ಮಗು ಕುಳಿತಿದ್ದ ವೇಳೆ ಸ್ಲ್ಯಾಬ್ ಒಡೆದು ಅದರೊಳಗೆ ಬಿದ್ದಿದೆ ಎನ್ನಲಾಗಿದೆ. ತೊಟ್ಟಿಯಲ್ಲಿ ಸುಮಾರು 2.5 ಅಡಿ ನೀರು ಇದ್ದು ಮಗು ಅದರಲ್ಲಿ ಮುಳುಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಮಗು ಯಾವ ಸಂದರ್ಭದಲ್ಲಿ ಟ್ಯಾಂಕ್‌ಗೆ ಬಿದ್ದಿದೆ ಎಂಬುದನ್ನು ತಿಳಿಯಲು ಪೊಲೀಸರು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.