ಬೆಂಗಳೂರು: ಬಿಜೆಪಿ ತೊರೆದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದು, ಬಿಜೆಪಿಯಲ್ಲಿ ತಮ್ಮನ್ನು ನಡೆಸಿಕೊಂಡ ರೀತಿ ಸರಿಯಿಲ್ಲ, ಕನಿಷ್ಠ ಗೌರವವನ್ನೂ ಕೊಡಲಿಲ್ಲ ಎಂದು ಕೆಂಡಾಮಂಡಲರಾದರು.
ಕಾಂಗ್ರೆಸ್ ಸೇರ್ಪಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಲಿಂಗಾಯಿತ ಸಮುದಾಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಿಟ್ಟರೆ ನಾನೇ ಹಿರಿಯ. ಅದೇ ಕಾರಣಕ್ಕೆ ನನ್ನನ್ನು ಪಕ್ಷದಿಂದ ಹೊರ ಹಾಕಿದರು. ಬಿಜೆಪಿಯಲ್ಲಿ ಲಿಂಗಾಯಿತರನ್ನು ಕಡೆಗಣಿಸಲಾಗುತ್ತಿದೆ ಎಂದರು.
ನಾನು ಮಂತ್ರಿ, ಮುಖ್ಯಮಂತ್ರಿಯಾಗಿದ್ದವನು. ಪಕ್ಷಕ್ಕಾಗಿ ಪ್ರಾಮಾಣಿಕ, ನಿಷ್ಠೆಯಿಂದ ದುಡಿದು, ಪಕ್ಷ ಸಂಘಟನೆ ಮಾಡಿದವನು ಅಂತಹ ವ್ಯಕ್ತಿಗೆ ಕೊನೇ ಘಳಿಗೆಯಲ್ಲಿ ಟಿಕೆಟ್ ಇಲ್ಲ ಎಂದರೆ ಆಘಾತವಾಗುವುದಿಲ್ಲವೇ. ನನಗೆ ಅಧಿಕಾರ ಬೇಡ, ಇನ್ನಾವುದೇ ಹುದ್ದೆ ಬೇಡ, ಈ ಬಾರಿ ಟಿಕೆಟ್ ಕೊಡಿ ಎಂದು ಎಲ್ಲಾ ರೀತಿಯಲ್ಲಿಯೂ ಕೇಳಿಕೊಂಡೆ ಆದರೂ ನಿರಾಕರಿಸಿದರು. ನಮ್ಮ ಮನೆಯಿಂದ ನಮ್ಮನ್ನೇ ಹೊರಗೆ ಹಾಕಲು ಹೊರಟಿದ್ದಾರೆ ಎಂಬುದು ಗೊತ್ತಾಗಿ ತುಂಬಾ ಬೇಸರವಾಯಿತು. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಅನಿವಾರ್ಯವಾಗಿ ಪಕ್ಷ ಬಿಡಬೇಕಾಯಿತು ಎಂದು ಬೇಸರಿಸಿದರು.
ರಾಜ್ಯ ಬಿಜೆಪಿ ಕೆಲವೇ ಕೆಲ ವ್ಯಕ್ತಿಗಳ ಕಂಟ್ರೋಲ್ ನಲ್ಲಿದೆ. ಕೆಲ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಬೆಳವಣಿಗೆ ವರಿಷ್ಠರ ಗಮನಕ್ಕೆ ಬಂದಿಲ್ಲ ಎನಿಸುತ್ತಿದೆ. ಪಕ್ಷದಲ್ಲಿ ಹಿರಿಯನ್ನು ನಡೆಸಿಕೊಳ್ಳುವ ರೀತಿ ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.