ಲೆವಿಸ್ ಬ್ರ್ಯಾಂಡೆಡ್ ಬಟ್ಟೆ ಖರೀದಿಗೆ ಎಲ್ಲರೂ ಮುಗಿಬೀಳ್ತಾರೆ. ಬಟ್ಟೆಯ ಗುಣಮಟ್ಟಕ್ಕಾಗಿ ಜನ ಕ್ಯಾಲಿಫೋರ್ನಿಯಾದ ಲೆವಿ ಸ್ಟ್ರಾಸ್ & ಕೋ ಅಮೆರಿಕದ ಬ್ರ್ಯಾಂಡ್ ಬಟ್ಟೆ ಹೆಸರುವಾಸಿಯಾಗಿದೆ. ಆದ್ರೆ ಇಂತಹ ಖ್ಯಾತ ಬ್ರ್ಯಾಂಡ್ ಹೆಸರು ಬಳಸಿ ಕಳಪೆ ಗುಣಮಟ್ಟದ ಅಥವಾ ನಕಲಿ ಲೆವಿಸ್ ಬ್ರ್ಯಾಂಡ್ ಮಾರಾಟವಾಗುತ್ತಿರುವ ಬಗ್ಗೆ ನೀವು ಎಚ್ಚರವಾಗಿರಬೇಕು.
ಅಮೆರಿಕದ ಬ್ರ್ಯಾಂಡ್ ಲೆವಿಯ ನಕಲಿ ಉತ್ಪಾದಿಸುವ ಗಾರ್ಮೆಂಟ್ ಘಟಕವನ್ನು ನಡೆಸುತ್ತಿದ್ದ ಗೋರೆಗಾಂವ್ನ ವ್ಯಕ್ತಿಯನ್ನು ಮುಂಬೈ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ ಗೋರೆಗಾಂವ್ ಪೂರ್ವದ ಫಿಲ್ಮ್ ಸಿಟಿ ರಸ್ತೆಯಲ್ಲಿರುವ ದಲ್ವಿ ಕಾಂಪೌಂಡ್ನಲ್ಲಿರುವ ಉತ್ಪಾದನಾ ಘಟಕ ಸ್ಮಿತಾ ಎಂಟರ್ಪ್ರೈಸಸ್ ಮುಂಬೈ ನಗರದ ಹಲವಾರು ಅಂಗಡಿಗಳಿಗೆ ಉತ್ಪನ್ನಗಳನ್ನು ಪೂರೈಸುತ್ತಿತ್ತು. ದಹಿಸರ್ನಲ್ಲಿರುವ ಕ್ರೈಂ ಬ್ರಾಂಚ್ ಕಛೇರಿಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ.
ಘಟಕದಿಂದ ಸುಮಾರು 300 ಟಿ-ಶರ್ಟ್ಗಳು, ಬ್ರಾಂಡ್ ಲೇಬಲ್ಗಳು, ಇತರ ವಸ್ತುಗಳು ಮತ್ತು ಫ್ಯೂಸಿಂಗ್ ಮತ್ತು ಪ್ರಿಂಟಿಂಗ್ ಯಂತ್ರೋಪಕರಣಗಳನ್ನು ಒಳಗೊಂಡಂತೆ 16 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಮೆರಿಕದ ಹೆಸರಾಂತ ಬ್ರಾಂಡ್ ಎಂಬ ಹಣೆಪಟ್ಟಿ ಹೊಂದಿರುವ ಲೆವಿಸ್ ಹೆಸರಿನಲ್ಲಿ ಕೆಳದರ್ಜೆಯ ಉತ್ಪನ್ನಗಳನ್ನು ತೆರೆದ ಮಾರುಕಟ್ಟೆಗಳಲ್ಲಿ, ಅಂಗಡಿಗಳಲ್ಲಿ, ಮಾಲ್ಗಳಲ್ಲಿ ಮತ್ತು ಇತರ ಮಳಿಗೆಗಳಲ್ಲಿ ಗ್ರಾಹಕರನ್ನು ವಂಚಿಸಲು ಮಾರಾಟ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಮಿತಾ ಎಂಟರ್ಪ್ರೈಸಸ್ ವಿರುದ್ಧ ಮತ್ತೊಂದು ಕಂಪನಿ ನೇತ್ರಿಕಾ ಎಂಟರ್ಪ್ರೈಸಸ್ನಿಂದ ದೂರು ದಾಖಲಾಗಿತ್ತು. ಅವರು ಉತ್ಪನ್ನಗಳನ್ನು ಪರಿಶೀಲಿಸಿ ಬಟ್ಟೆಗಳು ನಕಲಿ ಎಂದು ದೃಢಪಡಿಸಿದರು.
ಸ್ಮಿತಾ ಎಂಟರ್ಪ್ರೈಸಸ್ ಮಾಲೀಕನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಹಕ್ಕುಸ್ವಾಮ್ಯ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಪ್ಪೊಪ್ಪಿಕೊಂಡಿದ್ದು ದೊಡ್ಡ ಜಾಲ ಭಾಗಿಯಾಗಿರುವ ಸಾಧ್ಯತೆಯನ್ನು ಪೊಲೀಸರು ಶೋಧಿಸುತ್ತಿದ್ದಾರೆ.