ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಇದರ ಬಿಸಿ ಈಗ ಕಾಶಿ ಯಾತ್ರೆ ಕೈಗೊಳ್ಳಲು ಮುಂದಾಗಿದ್ದ ಕರ್ನಾಟಕದ ಯಾತ್ರಾರ್ಥಿಗಳಿಗೆ ತಟ್ಟಿದ್ದು, ಕಾಶಿ ದರ್ಶನ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರಿನಿಂದ ಉತ್ತರ ಪ್ರದೇಶದ ವಾರಣಾಸಿಗೆ ಸಂಚರಿಸುವ ಭಾರತ ಗೌರವ ಕಾಶಿ ದರ್ಶನ ವಿಶೇಷ ರೈಲು ಸಂಚಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡದ ಕಾರಣ ಇದನ್ನು ಈಗ ರದ್ದುಗೊಳಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಇದು ಮತದಾರರ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣ ನೀಡಿ ಆಯೋಗ ರೈಲು ಸಂಚಾರಕ್ಕೆ ಅನುಮತಿ ನೀಡಿಲ್ಲ.
ಏಪ್ರಿಲ್ 14 ರಿಂದ 28ರ ಅವಧಿಯಲ್ಲಿ ಈ ವಿಶೇಷ ರೈಲು ಬೆಂಗಳೂರಿಂದ ವಾರಣಾಸಿ, ಪ್ರಯಾಗ್ ರಾಜ್ ಗೆ ಸಂಚರಿಸಬೇಕಿತ್ತು. ಇದಕ್ಕಾಗಿ ಮಾರ್ಚ್ 25 ರಿಂದಲೇ ಬುಕಿಂಗ್ ಆರಂಭಿಸಲಾಗಿತ್ತು. ಬುಕಿಂಗ್ ಆರಂಭವಾದ ಬಳಿಕ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಇದಕ್ಕೆ ಅನುಮತಿ ಸಿಗಬಹುದು ಎಂಬ ನಿರೀಕ್ಷೆ ಇತ್ತಾದರೂ ಚುನಾವಣಾ ಆಯೋಗ ಇದಕ್ಕೆ ಹಸಿರು ನಿಶಾನೆ ತೋರಿಸಿಲ್ಲ.