ತಮಿಳಿನ ’ಘಜನಿ’ ಚಿತ್ರದಲ್ಲಿ ಅಲ್ಪಾವಧಿಯ ಸ್ಮರಣಾ ಶಕ್ತಿ ಕಳೆದುಕೊಂಡಿರುವ ನಾಯಕ ಸೂರ್ಯ ಯಾರಿಗೆ ನೆನಪಿಲ್ಲ? ಇಂಥದ್ದೇ ನಿಜ ಜೀವನದ ನಿದರ್ಶನವೊಂದು ಅಮೆರಿಕ ಕಾಲೇಜೊಂದರ ವಿದ್ಯಾರ್ಥಿನಿಯ ಜೀವನದಲ್ಲಿ ಜರುಗಿದೆ.
ರಿಲೀ ಹಾರ್ನರ್ ಹೆಸರಿನ ಈ ವಿದ್ಯಾರ್ಥಿನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಆಕೆಯ ಸ್ಮರಣಾ ಶಕ್ತಿಯೇ ಕುಂದಿಹೋಗಿದೆ. ಜುಲೈ 11, 2019ರಂದು ಸಂಭವಿಸಿದ ಅಪಘಾತವೊಂದರ ಕಾರಣ ರಿಲೀಗೆ ಪ್ರತಿ ಎರಡು ಗಂಟೆಗೊಮ್ಮೆ ಮಿದುಳು ಸ್ಮರಣಾ ಶಕ್ತಿ ಕಳೆದುಕೊಳ್ಳುತ್ತಾ ಸಾಗಿದೆ. ಅಂದಿನಿಂದ ಇಂದಿನವರೆಗೂ ರಿಲೀ ಪ್ರತಿದಿನ ಎದ್ದಾಗಲೂ ಅದು ಜುಲೈ 11, 2019 ಎಂದೇ ತಿಳಿದುಕೊಳ್ಳುತ್ತಿದ್ದಾರೆ.
ಸ್ಪ್ರಿಂಗ್‌ಫೀಲ್ಡ್‌ನಲ್ಲಿ ಆ ರಾತ್ರಿ ನಾಮೂಹಿಕ ನೃತ್ಯದಲ್ಲಿ ಭಾಗಿಯಾಗಿದ್ದ ರಿಲೀ ಮೇಲೆ ಕ್ರೌಡ್ ಸರ್ಫಿಂಗ್ ಮಾಡುತ್ತಿದ್ದ ಯುವಕನೊಬ್ಬ ಆಯತಪ್ಪಿ ಬಿದ್ದಿದ್ದಾನೆ. ರಿಲೀಗೆ ಬಿದ್ದ ಬಲವಾದ ಪೆಟ್ಟಿನಿಂದ ಆಕೆಗೆ 30-45 ಬಾರಿ ನೋವಿನ ತರಂಗಗಳು ಒಂದರ ಹಿಂದೆ ಒಂದರಂತೆ ಬಡಿದ ಕಾರಣ ಆಕೆಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾರನೇ ದಿನ ಆಸ್ಪತ್ರೆಯಲ್ಲಿ ಹಾಸಿಗೆಯಿಂದ ಎದ್ದ ರಿಲೀಗೆ ಅದು ಜುಲೈ 11 ಎಂದೇ ಅನಿಸಿದ್ದು, ರಾತ್ರಿಯ ಕಾರ್ಯಕ್ರಮಕ್ಕೆ ತಯಾರಾಗಲು ಮುಂದಾಗಿದ್ದಾಳೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಈಕೆಗೆ ಸ್ಮರಣಾ ಶಕ್ತಿ ಮರಳಲು ಆರಂಭಿಸಿದೆ.
ಟ್ರಾಮಾಟಿಕ್ ಬ್ರೇನ್ ಇಂಜುರಿಯಿಂದ (ಟಿಬಿಐ) ಬಳಲುತ್ತಿರುವ ರಿಲೀ ಈಗ ಕಾಗ್ನಿಟಿವ್ ಎಫ್‌ಎಕ್ಸ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಆಕೆಯ ಸ್ಮರಣಾ ಶಕ್ತಿಯಲ್ಲಿ ಅಲ್ಪ ಮಟ್ಟದ ಸುಧಾರಣೆ ಕಂಡಿದೆ. ಇವೆಲ್ಲ ಕಷ್ಟಗಳ ನಡುವೆಯೂ, 16ರ ಈ ಬಾಲೆಯ ಶಿಕ್ಷಣದ ಬಗ್ಗೆ ಆಕೆಯ ಕುಟುಂಬ ಬಹಳ ಒತ್ತು ನೀಡುತ್ತಿದೆ.