ಅಪ್ರಾಪ್ತ ಗೆಳತಿಯನ್ನು ಮದುವೆಯಾಗಲು ಆಕೆಯ ಆಧಾರ್ ಕಾರ್ಡ್ನಲ್ಲಿ ಹುಡುಗಿಯ ಜನ್ಮದಿನಾಂಕವನ್ನು ಬದಲಿಸಿ, ಮದುವೆಯಾಗಿದ್ದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ದಹಿಸರ್ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ ನೀಡಿದ ದೂರಿನ ಪ್ರಕಾರ ಬಾಲಕಿ ಮೇ 7, 2006 ರಂದು ಜನಿಸಿದಳು. ಆದರೆ ಆರೋಪಿಯು ಆಧಾರ್ ಕಾರ್ಡ್ನಲ್ಲಿ ಅದನ್ನು ಮಾರ್ಚ್ 12, 2004 ಎಂದು ಬದಲಾಯಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
23ರ ಹರೆಯದ ಆರೋಪಿ ಮತ್ತು ಯುವತಿ ಮದುವೆಯಾಗಿ ಕಾನೂನು ಪ್ರಕ್ರಿಯೆಗಾಗಿ ಪೊಲೀಸ್ ಠಾಣೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ನಾವು ಹುಡುಗಿಯ ತಂದೆಗೆ ಕರೆ ಮಾಡಿದಾಗ ಹುಡುಗಿಯ ವಯಸ್ಸಿನ ವ್ಯತ್ಯಾಸವು ಬಹಿರಂಗವಾಯಿತು ಎಂದು ಅವರು ಹೇಳಿದರು.
ಬಾಲಕಿಯ ತಂದೆ ದಹಿಸರ್ ಪೂರ್ವದ ರಾವಲ್ಪಾಡಾದಲ್ಲಿನ ಶಾಲೆಯಲ್ಲಿ ನೀಡಿದ ಆಕೆಯ ಮೂಲ ಜನನ ಪ್ರಮಾಣಪತ್ರವನ್ನು ಪೊಲೀಸರಿಗೆ ನೀಡಿದರು. ಹುಡುಗಿ ತಾನು ವಯಸ್ಕ ಎಂದು ತೋರಿಸಲು ಆಧಾರ್ ಕೇಂದ್ರದಲ್ಲಿ ಜನ್ಮ ದಿನಾಂಕವನ್ನು ಬದಲಾಯಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಅವರು ಹೇಳಿದರು.
ಬಾಲಕಿಯ ತಂದೆಯ ದೂರಿನ ಮೇರೆಗೆ ವರನನ್ನು ಅಪಹರಣ, ವಂಚನೆ, ಫೋರ್ಜರಿ ಮತ್ತು ಬಾಲ್ಯವಿವಾಹಕ್ಕೆ ಸಂಬಂಧಿಸಿದ ಅಪರಾಧಗಳಿಗಾಗಿ ಬಂಧಿಸಲಾಗಿದೆ ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ದಹಿಸರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.