ಬೆಂಗಳೂರು: ಸಿಇಟಿ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಜಿಯಲ್ಲಿ ಅರ್ಹತೆಗೆ ಅನುಗುಣವಾಗಿ ಸಮರ್ಪಕ ಮಾಹಿತಿ ತಿದ್ದುಪಡಿಗೆ ಏಪ್ರಿಲ್ 15ರಂದು ಬೆಳಿಗ್ಗೆ 11 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳು ತಮ್ಮ ಪ್ರವರ್ಗ ಮೀಸಲಾತಿ, ವಾರ್ಷಿಕ ಆದಾಯ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ, ವಿಶೇಷ ಕೆಟಗರಿ ಮತ್ತಿತರೆ ಮಾಹಿತಿ ವಿವರಗಳನ್ನು ಸರಿಯಾಗಿ ತುಂಬಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮಾಹಿತಿ ತಿದ್ದುಪಡಿ ಮಾಡಿದ ನಂತರ ಡಿಕ್ಲೆರೇಷನ್ ಬಟನ್ ಆಯ್ಕೆ ಮಾಡಿಕೊಂಡು ಫೈನಲ್ ಸಬ್ಮಿಷನ್ ಸಲ್ಲಿಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತಿದ್ದುಪಡಿ ಮಾಡಿದ ಅರ್ಜಿಯ ಮುದ್ರಿತ ಪ್ರತಿಯನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಮೊದಲು ಸಲ್ಲಿಸಿದ ಅರ್ಜಿಗಳನ್ನು ಮುಂದಿನ ಹಂತಗಳಿಗೆ ಪರಿಗಣಿಸಲಾಗುತ್ತದೆ. ಅಭ್ಯರ್ಥಿಯ ಹೆಸರು, ತಂದೆ -ತಾಯಿಯ ಹೆಸರು, ಜನ್ಮ ದಿನಾಂಕ ಮೊದಲಾದವುಗಳ ಬದಲಾವಣೆಗೆ ಅವಕಾಶ ಇರುವುದಿಲ್ಲ. ಇವುಗಳಲ್ಲಿ ಬದಲಾವಣೆ ಇದ್ದಲ್ಲಿ ಪರೀಕ್ಷಾ ಮಂಡಳಿ ಸಂಪರ್ಕಿಸಬೇಕಿದೆ. ಸಿಬಿಎಸ್‌ಇ ಮತ್ತು ಸಿಐಎಸ್ಇ ಪಠ್ಯಕ್ರಮದಲ್ಲಿ 10 ನೇ ತರಗತಿ ಓದಿದವರು ಈ ವಿವರಗಳನ್ನು ತಮ್ಮ ಅರ್ಜಿಯಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.